ಪಟನಾ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಪ್ರತಿ ರ‍್ಯಾಲಿಯಲ್ಲೂ ವಾಗ್ದಾಳಿ, ಆರೋಪ, ಟೀಕೆ, ವ್ಯಂಗ್ಯ ಮಾಡುತ್ತಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಜವಾಹರ ಲಾಲ್ ನೆಹರು ಅವರನ್ನು ಪ್ರಸ್ತಾಪಿಸಿ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.
ಬಿಹಾರದ ಮೋತಿಹರಿಯಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಮೋದಿ, “ಅಂಬೇಡ್ಕರ್ ಅವರು ಇರದಿದ್ದರೆ ಜವಾಹರ ಲಾಲ್ ನೆಹರು ಅವರು ಮೀಸಲಾತಿ ಜಾರಿಗೊಳಿಸಲು ಬಿಡುತ್ತಿರಲಿಲ್ಲ ಎಂದಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಲು ಜವಾಹರಲಾಲ್ ನೆಹರು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಇದೇ ಕಾರಣಕ್ಕಾಗಿ ಆಗಿನ ಮುಖ್ಯಮಂತ್ರಿಗಳಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿ ಪತ್ರ ಬರೆದಿದ್ದರು.
ಹಾಗೊಂದು ವೇಳೆ, ಡಾ.ಬಿ.ಆರ್. ಅಂಬೇಡ್ಕರ್ ಅವರು ಇರದಿದ್ದರೆ, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳಿಗೆ ಮೀಸಲಾತಿ ನೀಡಲು ಜವಾಹರ ಲಾಲ್ ನೆಹರು ಅವರು ಬಿಡುತ್ತಿರಲಿಲ್ಲ” ಎಂದು ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ನಿಂದ ಆಯ್ಕೆಯಾದ ಪ್ರಧಾನಿಗಳು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಯವರಿಗೆ ದ್ರೋಹ ಎಸಗಿದರು. ಇಂದಿರಾ ಗಾಂಧಿ ಆಗಲಿ, ರಾಜೀವ್ ಗಾಂಧಿ ಇರಲಿ, ಇವರೆಲ್ಲ ಮೀಸಲಾತಿಯನ್ನು ವಿರೋಧಿಸಿದವರೇ.
ಕಾಂಗ್ರೆಸ್‌ನಿಂದ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಯವರಿಗೆ ಎಂದಿಗೂ ಗೌರವ ಸಿಕ್ಕಿಲ್ಲ. ಇಂತಹ ಕಾಂಗ್ರೆಸ್ ನಾಯಕರು ಈಗ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸುತ್ತದೆ. ಮೀಸಲಾತಿಯನ್ನು ಕಿತ್ತು ಎಸೆಯಲಾಗುತ್ತಿದೆ ಎಂಬುದಾಗಿ ಸುಳ್ಳು ಹರಡುತ್ತಿದ್ದಾರೆ ಎಂದು ಹೇಳಿದರು.

