ಆಂಧ್ರಪ್ರದೇಶ: ನೆರೆಯ ರಾಜ್ಯ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಮಾರೇಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಏಳು ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ದಾರ್, “ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಗುಂಡಿನ ಚಕಮಕಿಯಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿಗೆ ಹಾನಿಯಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಹಿರಿಯ ಮಾವೋವಾದಿ ನಾಯಕ ಮತ್ತು ಕೇಂದ್ರ ಸಮಿತಿ ಸದಸ್ಯ ಮದ್ವಿ ಹಿಡ್ಮಾ ಸತ್ತವರಲ್ಲಿ ಸೇರಿದ್ದಾರೆ ಎಂದು ತಿಳಿದು ಬಂದಿದೆ.

1 ಕೋಟಿ ರೂ. ಬಹುಮಾನವನ್ನು ಹೊಂದಿದ್ದ ಮಾದ್ವಿ ಹಿಡ್ಮಾ ಭಯ ಹುಟ್ಟಿಸುವ ವ್ಯಕ್ತಿಯಾಗಿದ್ದು, ಭದ್ರತಾ ಪಡೆಗಳು ಸಹ ಈತನ ಬಗ್ಗೆ ಕಾಡಿನಲ್ಲಿ ಹೆಚ್ಚು ಅಲರ್ಟ್ ಆಗಿದ್ದರು.

ಈತ ಛತ್ತೀಸ್‌ಗಢ, ಒಡಿಶಾ, ತೆಲಂಗಾಣ ಮತ್ತು ಮಹಾರಾಷ್ಟ್ರದ ದಟ್ಟ ಕಾಡುಗಳನ್ನು ತನ್ನ ಸುರಕ್ಷಿತ ತಾಣವಾಗಿ ಬಳಸಿಕೊಂಡಿದ್ದು, ಆಗಾಗ್ಗೆ ಹೊಂಚುದಾಳಿಗಳ ಮೂಲಕ ಸೈನಿಕರ ಮೇಲೆ ದಾಳಿ ಮಾಡುತ್ತಿದ್ದರು. ಜಿರಾಮ್ ಕಣಿವೆ (2013) ಮತ್ತು ಬಿಜಾಪುರ (2021) ನಂತಹ ದೇಶದ ಕೆಲವು ದೊಡ್ಡ ನಕ್ಸಲೀಯ ದಾಳಿಗಳ ಮಾಸ್ಟರ್ ಮೈಂಡ್ ಕೂಡ ಹಿಡ್ಮಾ ಎಂದು ಪರಿಗಣಿಸಲಾಗಿದೆ.