ಛತ್ತೀಸ್‌ಗಢ: ನಕ್ಸಲರ ವಿರುದ್ಧ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯೇ ರಣರೋಚಕವಾಗಿದ್ದು. ಒಟ್ಟು 36 ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ.

ನಕ್ಸಲ್‌ ನಿಗ್ರಹ ಪಡೆ ಹಾಗೂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಕ್ಸಲರನ್ನ ಹತ್ಯೆ ಮಾಡಲಾಗಿದೆ. ದಾಂತೇವಾಡ-ನಾರಾಯಣಪುರ ಜಿಲ್ಲೆಗಳ ಗಡಿಯ ಅಬುಜ್‌ಮದ್‌ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಈ ಭೀಕರ ಎನ್‌ಕೌಂಟರ್‌ ನಡೆದಿದ್ದು, ಘಟನಾ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮದ್ದುಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ.

ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಅರಣ್ಯ ಪ್ರದೇಶದಲ್ಲಿ ನಾಲ್ಕು ದಿಕ್ಕುಗಳಿಂದ ನಕ್ಸಲರನ್ನು ಸುತ್ತುವರಿದ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಾವೋವಾದಿಗಳು ಮೃತಪಟ್ಟಿದ್ದಾರೆ. ಅರಣ್ಯದೊಳಗೆ ನುಸುಳಿರುವ ನಕ್ಸಲರ ಪತ್ತೆಗೆ ಶೋಧ ಮುಂದುವರಿದಿದೆ.

ಎನ್‌ಕೌಂಟರ್‌ ಸ್ಥಳದಿಂದ ಎಕೆ – 47 ರೈಫಲ್‌ ಸೇರಿ ಅಪಾರ ಪ್ರಮಾಣ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎನ್‌ಕೌಂಟರ್ ಬಗ್ಗೆ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣುದೇವ್ ಪ್ರತಿಕ್ರಿಯೆ ನೀಡಿದ್ದು, ಇದೊಂದು ದೊಡ್ಡ ಕಾರ್ಯಾಚರಣೆ ಎಂದಿರುವ ಅವರು, ಭದ್ರತಾ ಪಡೆಗಳ ಕಾರ್ಯಾಚರಣೆಗೆ ಅಭಿನಂದನೆ ಸಲ್ಲಿಸಿದ್ದಾರೆ.