ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಆಪರೇಷನ್ ಅಖಾಲ್ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಚರಣೆಯಲ್ಲಿ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಕುಲ್ಗಾಮ್‌ನಲ್ಲಿ ಶುಕ್ರವಾರ ರಾತ್ರಿಯಿಡೀ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದು, ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಮೃತ ಯೋಧರನ್ನು ಲ್ಯಾನ್ಸ್ ನಾಯಕ್ ಪ್ರೀತ್ಪಾಲ್ ಸಿಂಗ್ ಮತ್ತು ಸಿಪಾಯಿ ಹರ್ಮಿಂದರ್ ಸಿಂಗ್ ಎಂದು ಗುರುತಿಸಲಾಗಿದೆ.
ಹುತಾತ್ಮ ಯೋಧರ ಧೈರ್ಯ ಮತ್ತು ಸಮರ್ಪಣೆ ನಮಗೆ ಶಾಶ್ವತ ಸ್ಫೂರ್ತಿ ನೀಡುತ್ತದೆ. ಭಾರತೀಯ ಸೇನೆಯು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಮೃತ ಕುಟುಂಬಗಳೊಂದಿಗೆ ಸೇನೆ ಸದಾ ನಿಲ್ಲುತ್ತದೆ ಎಂದು ಚಿನಾರ್ ಕಾರ್ಪ್ಸ್ ಶನಿವಾರ ಎಕ್ಸ್ನಲ್ಲಿ ತಿಳಿಸಿದೆ. ಆಪರೇಷನ್ ಅಖಾಲ್ ಕಾರ್ಯಚರಣೆ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಯಾಚರಣೆಯ ಆರಂಭದಿಂದ ಇಲ್ಲಿಯವರೆಗೆ ಹನ್ನೊಂದು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

