ರಜೌರಿ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಖವಾಸ್ ತೆಹ್ಸಿಲ್‌ನ ಲಾಠಿ-ದರ್ದಿಯಾ ಪ್ರದೇಶದಲ್ಲಿ ಗುರುವಾರ ಮುಂಜಾನೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಅನುಮಾನಾಸ್ಪದ ಚಲನವಲನದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಡಗಿ ಕುಳಿತಿರುವ ಭಯೋತ್ಪಾದಕರ ಸುಳಿವು ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ಚಕಮಕಿ ಮುಂದುವರೆದಿದೆ.

ಈ ಪ್ರದೇಶದಲ್ಲಿ ಎರಡರಿಂದ ಮೂವರು ಭಯೋತ್ಪಾದಕರು ಸೇನಾ ಪಡೆಗೆ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಂಕಿತ ಭಯೋತ್ಪಾದಕರ ಸುಳಿವು ಸಿಕ್ಕಿದ್ದರಿಂದ ಬುಧವಾರ ರಾತ್ರಿ 9:30ಕ್ಕೆ ರಾಜೌರಿ ಜಿಲ್ಲೆಯ ಖೇರಿ ಮೊಹ್ರಾ ಲಾಥಿ ಮತ್ತು ದಂಥಲ್ ಗ್ರಾಮದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದವು ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.

ಸೋಮವಾರ ರಾತ್ರಿ, ರಜೌರಿ ಜಿಲ್ಲೆಯ ಮೀರಾ-ನಗ್ರೋಟಾ ಗ್ರಾಮದ ಮನೆಯೊಂದರ ಬಳಿ ಇಬ್ಬರು ಅಪರಿಚಿತ ವ್ಯಕ್ತಿಗಳನ್ನು ಗಮನಿಸಿದ ಗ್ರಾಮ ರಕ್ಷಣಾ ಸಿಬ್ಬಂದಿ  ಗುಂಪು ಗಾಳಿಯಲ್ಲಿ ಗುಂಡು ಹಾರಿಸಿತ್ತು. ಇದರ ಬೆನ್ನಲ್ಲೇ ಆ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್‌ಧಾರ್ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದ ಕೆಲವೇ ಕ್ಷಣಗಳಲ್ಲಿ ರಜೌರಿ ಎನ್‌ಕೌಂಟರ್‌ ನಡೆದಿದೆ.

ಇನ್ನು ಕುಮಕಾರ್ಡಿ ಮಚಲ್ ಸೆಕ್ಟರ್ ಜಿಲ್ಲೆಯ ಕುಪ್ವಾರದಲ್ಲಿ ಮತ್ತೊಂದು ಎನ್‌ಕೌಂಟರ್ ಆರಂಭವಾಗಿದೆ. ಈ ವೇಳೆ ಒಬ್ಬ ಉಗ್ರನನ್ನು ಸೈನಿಕರು ಹೊಡೆದುರುಳಿಸಿದ್ದಾರೆ. ಮಚ್ಚಲ್ ಸೆಕ್ಟರ್‌ನ ಕಮ್ಕಾರಿ ಸಾಮಾನ್ಯ ಪ್ರದೇಶದ ಮೂಲಕ ಉಗ್ರಗಾಮಿಗಳ ಗುಂಪೊಂದು ಒಳನುಸುಳಲು ಯತ್ನಿಸಿದ ಬಗ್ಗೆ ಗುಪ್ತಚರ ಮಾಹಿತಿ ಬಂದಿತ್ತು. ಈ ಮಾಹಿತಿ ಆಧರಿಸಿ ಭಾರತೀಯ ಸೇನೆಯ 57 ರಾಷ್ಟ್ರೀಯ ರೈಫಲ್ಸ್ (RR) ಮತ್ತು 53 ಪದಾತಿ ದಳಗಳು ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಉಗ್ರರ ಒಳನುಸುಳಿವಿಕೆ ಪ್ರಯತ್ನವನ್ನು ವಿಫಲಗೊಳಿಸಲು ಸಂಘಟಿತ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.

ಜಮ್ಮು ಮತ್ತು ಕಾಶ್ಮೀರವು ಕಳೆದ ಕೆಲವು ತಿಂಗಳುಗಳಲ್ಲಿ ಉಗ್ರಗಾಮಿ ಚಟುವಟಿಕೆಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ, ಜಮ್ಮು ಪ್ರದೇಶವು ಈಗ ಎನ್‌ಕೌಂಟರ್‌ಗಳ ಕೇಂದ್ರಬಿಂದುವಾಗಿದೆ, ಪಿರ್ ಪಂಜಾಲ್ ಪ್ರದೇಶದಲ್ಲಿ ಗುಂಡಿನ ಚಕಮಕಿಗಳಿಂದ ಸಶಸ್ತ್ರ ಪಡೆಗಳಲ್ಲಿ ಹಲವಾರು ಯೋದರ ಸಾವುನೋವುಗಳಿಗೆ ಕಾರಣವಾಗಿವೆ.