ಚೆನ್ನೈ: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಸೀಫುಡ್ ಸಂಸ್ಕರಣಾ ಘಟಕದಲ್ಲಿ ಇಂದು ಭೀಕರ ಅಮೋನಿಯಾ ಅನಿಲ ಸೋರಿಕೆಯಾಗಿದ್ದು, ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಕನಿಷ್ಠ 46 ಕಾರ್ಮಿಕರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರೆಲ್ಲರನ್ನೂ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರಲ್ಲಿ ಏಳು ಮಂದಿಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರಿಗೆ ವೆಂಟಿಲೇಟರ್ ಮೂಲಕ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಇಲ್ಲಿನ ಪೆರಿಯಪಾಳ್ಯಂ ಸಮೀಪದ ಕನ್ನಿಗೈಪೇರ್ ಎಂಬಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ‘ಸೇಂಟ್ ಪೀಟರ್ಸ್ ಆಂಡ್ ಪಾಲ್ ಸೀಫುಡ್ಸ್ ಎಕ್ಸ್‌ಪೋರ್ಟ್ಸ್’ ಎಂಬ ರಫ್ತು ಸಂಸ್ಥೆಯಲ್ಲಿ ಈ ದುರಂತ ಸಂಭವಿಸಿದೆ. ರವಿವಾರ ಮಧ್ಯಾಹ್ನದ ವೇಳೆಗೆ ಘಟಕದ ಒಳಗಿದ್ದ ಅಮೋನಿಯಾ ಗ್ಯಾಸ್ ಪೈಪ್‌ಲೈನ್‌ನಲ್ಲಿ ಇದ್ದಕ್ಕಿದ್ದಂತೆ ಸೋರಿಕೆ ಕಾಣಿಸಿಕೊಂಡಿದೆ.
ಕೆಲವೇ ನಿಮಿಷಗಳಲ್ಲಿ ಇಡೀ ಆವರಣದಲ್ಲಿ ವಿಷಗಾಳಿ ಹರಡಿದ್ದರಿಂದ, ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತೀವ್ರ ಉಸಿರಾಟದ ಸಮಸ್ಯೆಯಿಂದ ತತ್ತರಿಸಿದ್ದಾರೆ. ಕಾರ್ಮಿಕರಲ್ಲಿ ಬಹುತೇಕರು ಉತ್ತರ ಭಾರತದ ಮೂಲದವರಾಗಿದ್ದು, ಹೊಟ್ಟೆ ನೋವು, ತಲೆತಿರುಗುವಿಕೆ ಮತ್ತು ವಾಂತಿಯಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಹಾಗೂ ಆಂಬುಲೆನ್ಸ್‌ಗಳು ಅಸ್ವಸ್ಥಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ನೆರವಾದವು. ಕಾರ್ಮಿಕರನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸುತ್ತಿರುವ ಆತಂಕಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಇನ್ನು ಘಟನೆಯ ಬಗ್ಗೆ ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ. ಫ್ಯಾಕ್ಟರಿಯಲ್ಲಿ ಸುರಕ್ಷತಾ ಕ್ರಮಗಳ ಲೋಪದೋಷಗಳ ಬಗ್ಗೆ ಪೊಲೀಸರು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

