ಛತ್ತೀಸ್ಗಢ: ಬುಡಕಟ್ಟು ಮಹಿಳೆ ಮೇಲೆ ಛತ್ತೀಸ್ಗಢದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಪ್ರಕರಣದಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಂಟು ಮಂದಿ ಮದ್ಯದ ಅಮಲಿನಲ್ಲಿ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಆಗಸ್ಟ್ 12 ರಂದು ರಾಯಗಢ್‌ನ ಪುಸೌರ್ ಪ್ರದೇಶದ ಗ್ರಾಮದ ಬಳಿ ರಕ್ಷಾಬಂಧನವನ್ನು ಆಚರಿಸಿದ ನಂತರ ಸ್ಥಳೀಯ ಜಾತ್ರೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ರಾಯಗಢಕ್ಕೆ ಹೋಗುತ್ತಿದ್ದಾಗ ಎಂಟು ಮಂದಿ ಆಕೆಯನ್ನು ಅಪಹರಿಸಿ ಬಲವಂತವಾಗಿ ಸಮೀಪದ ಕೊಳದ ಬಳಿ ಕರೆದೊಯ್ದು ಐದು ಗಂಟೆಗಳ ಕಾಲ ಅತ್ಯಾಚಾರವೆಸಗಿದ್ದಾರೆ. ಘಟನೆಯ ನಂತರ, ಮಹಿಳೆ ಹೇಗೋ ತನ್ನ ಮನೆಗೆ ತಲುಪಿ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದಳು, ನಂತರ ಪೊಲೀಸರಿಗೆ ದೂರು ನೀಡಲಾಯಿತು.
ದೂರು ಸ್ವೀಕರಿಸಿದ ಪೊಲೀಸರು ತನಿಖೆ ಕೈಗೊಂಡು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ಮದ್ಯದ ಅಮಲಿನಲ್ಲಿದ್ದರು ಮತ್ತು ಮಹಿಳೆಯನ್ನು ಒಬ್ಬಂಟಿಯಾಗಿ ನೋಡಿದ ಅವರು ಆಕೆಯನ್ನು ಅಪಹರಿಸಿ, ಅತ್ಯಾಚಾರವೆಸಗಿ ನಂತರ ಸ್ಥಳದಿಂದ ಪರಾರಿಯಾಗಿದ್ದರು.
ಏತನ್ಮಧ್ಯೆ, ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮಾತನಾಡಿ, ಘಟನೆಯು ಅತ್ಯಂತ ಗಂಭೀರವಾಗಿದೆ ಮತ್ತು ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.
ರಾಯಗಢದ ಪುಸೌರ್ ಪ್ರದೇಶದಲ್ಲಿ ನಡೆದ ಅತ್ಯಾಚಾರ ಘಟನೆಯು ತುಂಬಾ ಗಂಭೀರವಾಗಿದೆ. ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಬೇಕು ಮತ್ತು ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ಸಂತ್ರಸ್ತೆಗೆ ರಕ್ಷಣೆ ನೀಡಬೇಕು. ಸಂತ್ರಸ್ತೆಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಬೇಕು ಎಂದು ಬಘೆಲ್ ಎಕ್ಸ್‌ನಲ್ಲಿ ಬರೆದಿದ್ದಾರೆ.

