ಮುಂಬೈ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಂದಕಕ್ಕೆ ಬಿದ್ದು ಬಾಲಕ ಸೇರಿ ಕಾರಿನಲ್ಲಿದ್ದ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಜರಾತ್ ನ ಭೀಮಪುರದಲ್ಲಿರುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಶುಕ್ರವಾರ (ನ.14) ನಡೆದಿದೆ.

ಶುಕ್ರವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಭೀಮಪುರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಮಹಾರಾಷ್ಟ್ರ ನೋಂದಣಿ ಹೊಂದಿದ (MHO3 EL 1388) XUV700 ಇದಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲ ಬದಿಗೆ ಬಂದು ಮಾಹಿ ನದಿಯ ಬಳಿ ತಡೆಗೋಡೆಗೆ ಢಿಕ್ಕಿ ಹೊಡೆದು ಕಂದಕಕ್ಕೆ ಉರುಳಿ ಬಿದ್ದಿದೆ.

ಪರಿಣಾಮ ಹದಿನೈದು ವರ್ಷದ ಬಾಲಕ ಸೇರಿ ಕಾರಿನಲ್ಲಿದ್ದ ಐದು ಮಂದಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತರನ್ನು ಮುಂಬೈನ ಕುರ್ಲಾದ ಇಶಾಕ್ ಚೌಧರಿ ಅವರ ಪುತ್ರ ಗುಲಾಮ್ ರಸೂಲ್ (70), ಗುಲಾಮ್ ರಸೂಲ್ ಚೌಧರಿ ಅವರ ಪುತ್ರ ಖಾಲಿಸ್, ಮುಂಬೈನ ಕುರ್ಲಾದ ನಿವಾಸಿ ಅಬ್ದುಲ್ ಗುಲಾಮ್, ಮುಂಬೈನ ಕುರ್ಲಾದ ನಿವಾಸಿ ಡ್ಯಾನಿಶ್ (15), ಮತ್ತು ದುರ್ಗೇಶ್ ಪ್ರಸಾದ್ (35) ಎಂದು ಗುರುತಿಸಲಾಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.