ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ನಾಲ್ವರು ಮೀನುಗಾರರನ್ನು ಸ್ಥಳೀಯರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಸುರೇಂದ್ರ ಹರಿಕಂತ್ರ ಅವರಿಗೆ ಸೇರಿದ ‘ಲಕ್ಷ್ಮೀಕೃಪ’ ಎಂಬ ಬೋಟ್ ಮಂಗಳವಾರ ಬೆಳಗ್ಗೆ ತದಡಿ ಬಂದರಿನಿಂದ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಿತ್ತು. ಆದರೆ, ಬಂದರಿನಿಂದ ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ಅಳವೆಯಲ್ಲಿ ತುಂಬಿದ್ದ ಹೂಳಿನಲ್ಲಿ ಬೋಟ್ ಸಿಲುಕಿಕೊಂಡಿದೆ.
ಇದೇ ವೇಳೆ ಅಪ್ಪಳಿಸಿದ ಭಾರೀ ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟ್‌ನ ತಳಭಾಗ ಜಜ್ಜಲ್ಪಟ್ಟು ನೀರು ತುಂಬಿ ಮುಳುಗಿದೆ. ಬೋಟ್ ಮುಳುಗುತ್ತಿರುವುದನ್ನು ಗಮನಿಸಿದ ಸಮೀಪದ ಸ್ಥಳೀಯ ಮೀನುಗಾರರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬೋಟ್‌ನಲ್ಲಿದ್ದ ನಾಲ್ವರನ್ನೂ ದಡಕ್ಕೆ ಕರೆತಂದು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಈ ಅಪಘಾತದಿಂದಾಗಿ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ತದಡಿ ಅಳವೆ ಭಾಗದಲ್ಲಿ ಹೂಳು ಸರಿಯಾಗಿ ತೆರವಾಗದ ಕಾರಣ ಇಲ್ಲಿ ಪದೇಪದೇ ಇಂತಹ ಅನಾಹುತಗಳು ನಡೆಯುತ್ತಿವೆ. ಕೇವಲ ಎರಡು ದಿನಗಳ ಹಿಂದೆಯಷ್ಟೇ ಇದೇ ಜಾಗದಲ್ಲಿ ‘ಶ್ರೀದೇವಿ’ ಎಂಬ ಮತ್ತೊಂದು ಬೋಟ್ ಮುಳುಗಡೆಯಾಗಿತ್ತು. ಒಂದೇ ವಾರದಲ್ಲಿ ಎರಡು ಬೋಟ್‌ಗಳು ಹೂಳಿಗೆ ಸಿಲುಕಿ ಅಪಘಾತಕ್ಕೀಡಾಗಿರುವುದು ಸ್ಥಳೀಯ ಮೀನುಗಾರರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಹೂಳನ್ನು ತಕ್ಷಣವೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

