ಪುಣೆ: ಇಂದು ಪುಣೆಯಲ್ಲಿ ರೈಲು ಅವಘಢ ಉಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪುಣೆಯಿಂದ ಮಹಾರಾಷ್ಟ್ರದ ದೌಂಡ್‌ಗೆ ಪ್ರಯಾಣಿಸುತ್ತಿದ್ದ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ರೈಲಿನ ಶೌಚಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.
ಸದ್ಯದ ಮಾಹಿತಿ ಪ್ರಕಾರ ಶೌಚಾಲಯದ ಒಳಗೆ ಒಬ್ಬರು ವ್ಯಕ್ತಿ ಲಾಕ್ ಆಗಿದ್ದರು, ಬಾಗಿಲು ಸಹ ತೆಗೆಯಲು ಬರದ ಕಾರಣ ಸಿಕ್ಕಿಬಿದ್ದು ಪರದಾಡಿದ್ದಾರೆ. ಒಳಗೆ ಸಿಕ್ಕಿಹಾಕಿಕೊಂಡಿದ್ದ ವಕ್ತಿ ಕಿರುಚಾಡಿದ್ದು ಹಾಗೂ ಹೊಗೆ ಬರುವುದನ್ನ ನೋಡಿದ ಪ್ರಯಾಣಿಕರು ಜಾಗೃತರಾಗಿದ್ದು, ಶೌಚಾಲಯದ ಬಾಗಿಲು ತೆರೆದು ಒಳಗಿದ್ದ ವ್ಯಕ್ತಿಯನ್ನ ರಕ್ಷಿಸಿದ್ದಾರೆ.
ರೈಲ್ವೆ ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ 30 ನಿಮಿಷಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಬೆಂಕಿಯನ್ನು ನಂದಿಸಲು ಒಟ್ಟು ಮೂರು ಅಗ್ನಿಶಾಮಕ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಬೆಂಕಿಯ ಪ್ರಮಾಣ ಬಹಳ ತೀವ್ರವಾಗಿದ್ದು, ಒಂದು ಬೋಗಿ ಸಂಪೂರ್ಣವಾಗಿ ಸುಟ್ಟುಹೋಗಿದೆ.

