ಶಿಮ್ಲಾ: ಭಾರೀ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಹಿಮಾಚಲ ಪ್ರದೇಶದಲ್ಲಿರುವ ಕಾಂಗ್ರೆಸ್ ಸರ್ಕಾರ ಆದಾಯ ಪಾವತಿಸುವ ವ್ಯಕ್ತಿಗಳಿಗೆ ಉಚಿತ ವಿದ್ಯುತ್ ನೀಡದೇ ಇರುವ ಅಚ್ಚರಿಯ ನಿರ್ಧಾರ ಕೈಗೊಂಡಿದೆ.
ಸಿಎಂ ಸುಖುವಿಂದರ್ ಸಿಂಗ್ ಸುಕ್ಕು ನೇತೃತ್ವದಲ್ಲಿ ಶುಕ್ರವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಎಲ್ಲಾ ಆದಾಯ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ಉಚಿತ ವಿದ್ಯುತ್ ಯೋಜನೆಯನ್ನು ಹಿಂಪಡೆಯಲು ನಿರ್ಧರಿಸಿದೆ.
ಬಿಪಿಎಲ್ ಕಾರ್ಡ್ ಮತ್ತು ನಗರ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾಸಿಕ 125 ಯೂನಿಟ್ ಉಚಿತ ವಿದ್ಯುತ್ ಮುಂದುವರಿಯಲಿದೆ. ವಿದ್ಯುತ್ ಸಬ್ಸಿಡಿಗೆ ಹಲವು ಷರತ್ತುಗಳನ್ನು ಈಗ ಹಾಕಲಾಗಿದೆ. ಒಂದು ಕುಟುಂಬದ ಒಂದು ಮೀಟರ್‌ಗೆ ಮಾತ್ರ ಇನ್ನು ಮುಂದೆ ಸಬ್ಸಿಡಿ ಸಿಗಲಿದೆ. ಉಚಿತ ವಿದ್ಯುತ್ ಪಡೆಯುವಸಂಪರ್ಕಕ್ಕೆ ಆಧಾರ್ ನಂಬರ್ ಜೊತೆಗೆ ಪಡಿತರ ಸಂಖ್ಯೆಯನ್ನು ಲಿಂಕ್ ಮಾಡಲಾಗುತ್ತದೆ.
ರಾಜ್ಯದಲ್ಲಿ 26 ಲಕ್ಷ ವಿದ್ಯುತ್ ಗ್ರಾಹಕರಿದ್ದು ಅವರಲ್ಲಿ 12 ಲಕ್ಷ ಜನರು 125 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಮೂಲಕ ಶೂನ್ಯ ವಿದ್ಯುತ್ ಬಿಲ್ ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್ಯದ ಒಟ್ಟು ಸಾಲ 85,000 ಕೋಟಿ ರೂ. ದಾಟಿದ್ದು ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಹಿಮಾಚಲ ಪ್ರದೇಶದ ರಾಜ್ಯ ವಿದ್ಯುತ್ ಮಂಡಳಿ 2023-24 ಹಣಕಾಸು ವರ್ಷದಲ್ಲಿ 1,800 ಕೋಟಿ ರೂ. ನಷ್ಟ ಅನುಭವಿಸಿದೆ.

