ಹೊಸದಿಲ್ಲಿ: ವಾಹನ ಪಾರ್ಕಿಂಗ್ ವಿಚಾರದಲ್ಲಿ ಉಂಟಾದ ಜಗಳದಲ್ಲಿ 34 ವರ್ಷದ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಸೋಮವಾರ ಮುಂಜಾನೆ ಪೂರ್ವ ದಿಲ್ಲಿಯ ಪ್ರೀತ್ ವಿಹಾರ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಪಂಕಜ್ ನಯ್ಯರ್ ಎಂದು ಗುರುತಿಸಲಾಗಿದೆ. ಪಂಕಜ್ ನಯ್ಯರ್, ಅವರ ಸಹೋದರ ಪಾರಸ್ ಹಾಗೂ ಆರೋಪಿ ಗೌರವ್ ಶರ್ಮ ಮತ್ತಿತರರ ನಡುವೆ ವಾಹನ ಪಾರ್ಕಿಂಗ್ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದ್ದು, ಇದು ಪಂಕಜ್ ನಯ್ಯರ್ ಹತ್ಯೆಯಲ್ಲಿ ಅಂತ್ಯಗೊಂಡಿದೆ.

ಈ ಮಾತಿನ ಚಕಮಕಿಯ ವೇಳೆ ಪಂಕಜ್ ನಯ್ಯರ್ ಎದೆಗೆ ಗೌರವ್ ಶರ್ಮ ಗುಂಡಿಕ್ಕಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಆದಷ್ಟೂ ಶೀಘ್ರವಾಗಿ ಬಂಧಿಸಲು ಪ್ರಯತ್ನಗಳು ಮುಂದುವರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.