ತಿರುವನಂತಪುರಂ: ಭೂಕುಸಿತದ ಕರಾಳ ಭೀಕರತೆಯನ್ನು ಅನುಭವಿಸಿದ ವಯನಾಡಿಗೆ ಈಗ ಭೂಕಂಪದ ಭೀತಿ ಎದುರಾಗಿದೆ. ಇಂದು ಬೆಳಗ್ಗೆ 10:15 ಕ್ಕೆ ವಯನಾಡಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಇತ್ತೀಚೆಗೆ ಭೂಕುಸಿತ ಸಂಭವಿಸಿದ ಚೂರಲ್ಮಲಾ – ಮುಂಡಕ್ಕೈ ಪ್ರದೇಶಗಳಿಂದ ಸುಮಾರು 15 ರಿಂದ 20 ಕಿಲೋಮೀಟರ್ ದೂರದಲ್ಲಿರುವ ಅಂಬಲವಾಯಲ್-ಎಡಕಲ್ ಪ್ರದೇಶಗಳಲ್ಲಿ ಬೆಳಗ್ಗೆ ಗುಡುಗು ಸದ್ದು ಕೇಳಿಸಿತು ಎನ್ನಲಾಗಿದೆ.

ಪಕ್ಕದ ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಭಾಗಗಳಿಂದ ಇದೇ ರೀತಿಯ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ. ಶಬ್ದ ಕೇಳಿ ಅಂಬಲವಾಯಲ್-ಎಡಕಲ್ ಭಾಗದ ಜನರು ಮನೆಯಿಂದ ಹೊರ ಬಂದರು. ಈ ಪ್ರದೇಶದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪರಿಹಾರ ಶಿಬಿರದಲ್ಲಿ ಹಲವು ಕುಟುಂಬಗಳು ಆಶ್ರಯ ಪಡೆದಿವೆ.