ಮುಂಬೈ: ರಾಜ್ಯಾದ್ಯಂತ ನಕಲಿ ಹಾಗೂ ಕಲಬೆರಕೆ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ತಡೆ ಹಾಕಲು ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಹಾಲಿನ ಕೊಬ್ಬಿನ ಬದಲಿಗೆ ಸಸ್ಯಜನ್ಯ ಕೊಬ್ಬು ಅಥವಾ ತಾಳೆ ಎಣ್ಣೆಯನ್ನು ಬಳಸಿ ತಯಾರಿಸುವ ‘ನಕಲಿ ಪನೀರ್’ ಉತ್ಪಾದನೆ, ಸಂಗ್ರಹಣೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಛತ್ತೀಸ್‌ಗಢದ ನಂತರ ಇಂತಹ ಕಟ್ಟುನಿಟ್ಟಿನ ನಿಷೇಧ ಹೇರಿದ ದೇಶದ ಎರಡನೇ ರಾಜ್ಯವಾಗಿ ಮಹಾರಾಷ್ಟ್ರ ಹೊರಹೊಮ್ಮಿದೆ.ಆಹಾರ ಭದ್ರತಾ ಆಯುಕ್ತ ತುಕಾರಾಂ ಮುಂಢೆ ಅವರು ಹೊರಡಿಸಿರುವ ಈ ಅಧಿಕೃತ ಆದೇಶವು ಜುಲೈ 30 ರಿಂದಲೇ ಜಾರಿಗೆ ಬಂದಿದ್ದು, ರಾಜ್ಯದಾದ್ಯಂತ ನಕಲಿ ಪನೀರ್‌ ತಯಾರಿಕೆ, ಸಾಗಾಣಿಕೆ, ಸಗಟು ಹಾಗೂ ಚಿಲ್ಲರೆ ಮಾರಾಟವನ್ನು ತಡೆಹಿಡಿಯಲಾಗಿದೆ.

ಎಫ್‌ಎಸ್‌ಎಸ್‌ಎಐ (FSSAI) ನಿಯಮಗಳ ಪ್ರಕಾರ ಪನೀರ್ ಅನ್ನು ಕೇವಲ ಶುದ್ಧ ಹಾಲಿನಿಂದ ಮಾತ್ರ ತಯಾರಿಸಬೇಕು. ಆದರೆ ಕಡಿಮೆ ವೆಚ್ಚದ ತಾಳೆ ಎಣ್ಣೆ, ಕೆನೆರಹಿತ ಹಾಲಿನ ಪುಡಿ ಮತ್ತು ರಾಸಾಯನಿಕಗಳನ್ನು ಬಳಸಿ ತಯಾರಿಸಿದ ನಕಲಿ ಪನೀರ್ ಅನ್ನು ಗ್ರಾಹಕರಿಗೆ ಮಾರಿ ವಂಚಿಸಲಾಗುತ್ತಿತ್ತು.

ಈ ಹೊಸ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ‘ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ, 2006’ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಅಪರಾಧದ ತೀವ್ರತೆಗೆ ಅನುಗುಣವಾಗಿ ಆರೋಪಿಗಳಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಒಂದೊಮ್ಮೆ ಇಂತಹ ಅಸುರಕ್ಷಿತ ನಕಲಿ ಪನೀರ್ ಸೇವನೆಯಿಂದ ಸಾವು ಸಂಭವಿಸಿದರೆ, ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಹಾಗೂ ಕನಿಷ್ಠ 10 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಆಹಾರ ಮತ್ತು ಔಷಧ ಆಡಳಿತ ಮಂಡಳಿ (ಎಫ್‌ಡಿಎ) ಸ್ಪಷ್ಟಪಡಿಸಿದೆ. ಇತ್ತೀಚೆಗೆ ಪುಣೆಯ ಗೋದಾಮೊಂದರ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು 1,400 ಕೆಜಿ ನಕಲಿ ಪನೀರ್ ಹಾಗೂ ಅಪಾರ ಪ್ರಮಾಣದ ತಾಳೆ ಎಣ್ಣೆಯನ್ನು ವಶಪಡಿಸಿಕೊಂಡಿದ್ದರು.