ಮುಂಬೈ : ಭಾರತದಲ್ಲಿ ವಾಸ ಮಾಡುವ ಎಲ್ಲರೂ ಹಿಂದೂಗಳು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಆರ್‌ಎಸ್‌ಎಸ್‌ನ ಶತಮಾನೋತ್ಸವ ಅಂಗವಾಗಿ ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತಾಡಿದ ಅವ್ರು ‘ಹಿಂದೂ ಎಂಬ ಪದವು ನಾಮಪದವಲ್ಲ, ಅದು ವಿಶೇಷಣ. ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
‘ಆರ್‌ಎಸ್‌ಎಸ್ ಬೇರೆ ಯಾವುದೇ ಸಂಘಟನೆಯೊಂದಿಗೆ ಸ್ಪರ್ಧೆಯೊಡ್ಡಲು ಹೊರಹೊಮ್ಮಿಲ್ಲ. ಯಾವುದೇ ಸಂಘಟನೆಗೆ ಪ್ರತಿಕ್ರಿಯೆಯಾಗಿ ಅಥವಾ ವಿರೋಧವಾಗಿಯೂ ಹೊರಹೊಮ್ಮಿಲ್ಲ. ಸಂಘ (ಆರ್‌ಎಸ್‌ಎಸ್) ಜನಪ್ರಿಯತೆ, ಅಧಿಕಾರವನ್ನು ಬಯಸುವುದಿಲ್ಲ. ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಒಳ್ಳೆಯ ಕೆಲಸಗಳನ್ನು ಸರಿಯಾಗಿಯೇ ಮಾಡಬೇಕು ಎಂಬುದು ಸಂಘದ ಉದ್ದೇಶ’ ಎಂದಿದ್ದಾರೆ.
ಸಂಘದ ಸ್ವಯಂಸೇವಕರು ಸರ್ಕಾರದಿಂದ ಯಾವುದೇ ಹಣವನ್ನು ಪಡೆಯದೆ 1.3 ಲಕ್ಷಕ್ಕೂ ಹೆಚ್ಚು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಸಮಾಜದ ಸಹಕಾರದೊಂದಿಗೆ ತಮ್ಮ ಸ್ವಂತ ಹಣವನ್ನು ಖರ್ಚು ಮಾಡುತ್ತಿದ್ದಾರೆ’ ಎಂದೂ ಮೋಹನ್ ಭಾಗವತ್ ಹೇಳಿದ್ದಾರೆ.

