ಮುಂಬೈ: ದೇಶದ ಪ್ರಸಿದ್ಧ ಬ್ರ್ಯಾಂಡ್‌ಗಳಾದ ಎವರೆಸ್ಟ್ ಮತ್ತು ಎಲ್‌ಜಿ ಕಂಪನಿಯ ಇಂಗಿನ ಉತ್ಪನ್ನಗಳ ಮಾರಾಟವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ.
ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸಿದ ಲ್ಯಾಬ್ ಪರೀಕ್ಷೆಯಲ್ಲಿ ಈ ಎರಡೂ ಬ್ರ್ಯಾಂಡ್‌ಗಳ ಇಂಗು ಕಳಪೆ ಗುಣಮಟ್ಟದಿಂದ ಕೂಡಿರುವುದು ದೃಢಪಟ್ಟಿದೆ. ನಿಯಮಗಳ ಪ್ರಕಾರ ಇಂಗಿನಲ್ಲಿ ಕನಿಷ್ಠ ಶೇ. 5ರಷ್ಟು ಆಲ್ಕೋಹಾಲ್ ಸೋಲ್ಯುಬಲ್ ಎಕ್ಸ್‌ಟ್ರಾಕ್ಟ್ ಇರಬೇಕು. ಆದರೆ ಈ ಕಂಪನಿಗಳ ಉತ್ಪನ್ನಗಳಲ್ಲಿ ಶೇ. 30ರಿಂದ 40ರಷ್ಟು ಕಡಿಮೆ ಶುದ್ಧ ಇಂಗು ಬಳಸಿರುವುದು ಕಂಡುಬಂದಿದೆ.
ಇಷ್ಟೇ ಅಲ್ಲದೆ, ಎಲ್‌ಜಿ ಇಂಗಿನಲ್ಲಿ ನಿಗದಿಗಿಂತ ಅಧಿಕ ಪ್ರಮಾಣದ ಪಿಷ್ಟ ಬೆರೆಸಿರುವುದು ಪತ್ತೆಯಾಗಿದೆ. ಗರಿಷ್ಠ ಶೇ. 1ರಷ್ಟು ಮಾತ್ರ ಪಿಷ್ಟ ಬಳಸಲು ಅನುಮತಿ ಇದ್ದರೂ, ಶೇ. 15ರಿಂದ 32ರಷ್ಟು ಪಿಷ್ಟ ಬಳಸಿರುವುದು ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಇದು ಸಂಪೂರ್ಣವಾಗಿ ಆಹಾರ ಕಾಯ್ದೆಯ ಉಲ್ಲಂಘನೆಯಾಗಿದೆ.
ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿರುವ ಇಂಗಿನ ಸ್ಟಾಕ್ ಅನ್ನು ತಕ್ಷಣವೇ ಹಿಂಪಡೆಯುವಂತೆ FSSAI ಕಂಪನಿಗಳಿಗೆ ಸೂಚನೆ ನೀಡಿದೆ. ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಇಂತಹ ಪ್ರಸಿದ್ಧ ಕಂಪನಿಗಳ ಧೋರಣೆಗೆ ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

