ದೆಹಲಿ: 400 ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಎನ್ಡಿಎಗೆ ಈ ಬಾರಿ 300 ಸೀಟು ಕೂಡಾ ದಕ್ಕಿಲ್ಲ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಏಕಾಂಗಿಯಾಗಿ ಬಹುಮತ ಪಡೆದಿದ್ದ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತವನ್ನೂ ತಲುಪಿಲ್ಲ. ಎನ್‌ಡಿಎ ಮೈತ್ರಿ ಪಕ್ಷಗಳ ಬಲ ಮ್ಯಾಜಿಕ್ ನಂಬರ್ಗಿಂತಲೂ ಕೆಲವೇ ಸೀಟುಗಳು ಹೆಚ್ಚು ಬಂದಿವೆ. ಈ ಬಾರಿ ಬಿಜೆಪಿಗೆ ಹೊಡೆತ ಬಿದ್ದಿದ್ದೆಲ್ಲಿ ಗೊತ್ತಾ. . ?
ಈ ಬಾರಿ ಹಿಂದಿ ಭಾಷಿಕ ರಾಜ್ಯಗಳಲ್ಲೇ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಹರಿಯಾಣ ಅಲ್ಲದೇ ಪಂಜಾಬ್ನಲ್ಲೂ ಬಿಜೆಪಿ ನೀರಸ ಫಲಿತಾಂಶ ತೋರಿದೆ… ಅದರಲ್ಲೂ ಉತ್ತರ ಪ್ರದೇಶವೊಂದರಲ್ಲೇ ಬಿಜೆಪಿ 30 ಸೀಟುಗಳನ್ನ ಕಳೆದುಕೊಂಡಿದೆ. ರಾಮನ ವಿಚಾರದಲ್ಲಿ ಸದಾ ಮೈಲೇಜ್ನಲ್ಲಿದ್ದ ಬಿಜೆಪಿಗೆ ಅದ್ಯಾಕೋ ಶ್ರೀರಾಮ ಕೃಪೆ ತೋರಿದಂತಿಲ್ಲ, ರಾಮಜನ್ಮಭೂಮಿ ಅಯೋಧ್ಯೆಯಲ್ಲೇ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್, ಇಂಡಿಯಾ ಒಕ್ಕೂಟದ ಅಭ್ಯರ್ಥಿ ಅವದೇಶ್ ಪ್ರಸಾದ್ ಎದುರು ಸೋಲು ಕಂಡಿದ್ದಾರೆ.
ಮತ್ತೊಂದೆಡೆ 25 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಬಿಜೆಪಿ ಈ ಬಾರಿ 14 ಕ್ಷೇತ್ರಗಳನ್ನಷ್ಟೇ ಗೆದ್ದಿದೆ. ಕಾಂಗ್ರೆಸ್ 8 ಹಾಗೂ ಇತರರು 3 ಸ್ಥಾನಗಳನ್ನು ಗಳಿಸಿದ್ದಾರೆ.
ಮಹಾರಾಷ್ಟ್ರದಲ್ಲೂ ಎನ್‌ಡಿಎ ಮೈತ್ರಿಕೂಟ ಕ್ಷೇತ್ರಬಲ ಕುಗ್ಗಿದೆ. ಒಟ್ಟು 48 ಕ್ಷೇತ್ರಗಳಲ್ಲಿ ಈ ಬಾರಿ 18 ಸ್ಥಾನಗಳನ್ನಷ್ಟೇ ಪಡೆದಿದೆ.
ಇತ್ತ ಕರ್ನಾಟಕದಲ್ಲಿ ಈ ಬಾರಿ ಜೆಡಿಎಸ್ ಮೈತ್ರಿಯೊಂದಿಗೆ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದ ಬಿಜೆಪಿ ನಿರಾಸೆ ಅನುಭವಿಸಿದೆ. ಕಳೆದ ಬಾರಿಗಿಂತ 7 ಸ್ಥಾನಗಳನ್ನು ಕಳೆದುಕೊಂಡಿದೆ. ಚಿಕ್ಕೋಡಿ, ಕಲಬುರಗಿ, ಬಳ್ಳಾರಿ, ಬೀದರ್ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸೋಲು ಕಂಡಿದೆ.

