ನವದೆಹಲಿ: ಮೇಲ್ಮನೆಯ ಉಪಚುನಾವಣೆಯಲ್ಲಿ 9 ಬಿಜೆಪಿ ಸದಸ್ಯರು ಮತ್ತು ಇಬ್ಬರು ಮಿತ್ರಪಕ್ಷಗಳಿಂದ ಅವಿರೋಧವಾಗಿ ಆಯ್ಕೆಯಾದ ಕಾರಣ ಆಡಳಿತಾರೂಢ ಎನ್‌ಡಿಎ ಇಂದು ರಾಜ್ಯಸಭೆಯಲ್ಲಿ ಬಹುಮತದ ಗಡಿ ತಲುಪಿದೆ. ಈ 9ರೊಂದಿಗೆ ಬಿಜೆಪಿಯ ಬಲ 96ಕ್ಕೆ ತಲುಪಿದ್ದು, ಮೇಲ್ಮನೆಯಲ್ಲಿ ಎನ್‌ಡಿಎ 112ಕ್ಕೆ ತಲುಪಿದೆ. ಅವಿರೋಧವಾಗಿ ಆಯ್ಕೆಯಾದ ಇತರ ಮೂವರಲ್ಲಿ ಎನ್‌ಡಿಎ ಮಿತ್ರಪಕ್ಷಗಳಾದ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಮತ್ತು ರಾಷ್ಟ್ರೀಯ ಲೋಕ ಮಂಚ್‌ನಿಂದ ತಲಾ ಒಬ್ಬರು ಸೇರಿದ್ದಾರೆ.

ಕಾಂಗ್ರೆಸ್‌ನ ಒಬ್ಬರು ಸದಸ್ಯರೂ ಚುನಾಯಿತರಾಗಿದ್ದಾರೆ. ಈ ಮೂಲಕ ಮೇಲ್ಮನೆಯಲ್ಲಿ ಪ್ರತಿಪಕ್ಷಗಳ ಸಂಖ್ಯೆ 85ಕ್ಕೆ ಏರಿಕೆಯಾಗಿದೆ. ರಾಜ್ಯಸಭೆಯು 245 ಸ್ಥಾನಗಳನ್ನು ಹೊಂದಿದೆ. ಆದರೂ ಪ್ರಸ್ತುತ 8 ಹುದ್ದೆಗಳು ಖಾಲಿ ಇವೆ. ಜಮ್ಮು ಮತ್ತು ಕಾಶ್ಮೀರದಿಂದ 4 ಮತ್ತು 4 ನಾಮನಿರ್ದೇಶಿತ ಸ್ಥಾನಗಳಿವೆ. ಬಹುಮತ ಸಾಬೀತುಪಡಿಸಲು 119 ಸ್ಥಾನಗಳ ಅಗತ್ಯವಿದೆ. ಮಿತ್ರಪಕ್ಷಗಳು ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಎನ್​ಡಿಎ ಆ ಗಡಿಯನ್ನು ದಾಟಿದೆ.