ತಿರುವನಂತಪುರ: ಸಿಎಂಆರ್‌ಎಲ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ ಬುಧವಾರ ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರ ನಿವಾಸ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದೆ.
ಬೆಂಗಳೂರಿನಲ್ಲಿರುವ ಪಿಣರಾಯಿ ವಿಜಯನ್ ಪುತ್ರಿ ಟಿ.ವೀಣಾ ಒಡೆತನದ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಹೆಸರಿನ ಐಟಿ ಕಂಪನಿ, ವೀಣಾ ನಿವಾಸ ಸೇರಿದಂತೆ ಬೆಂಗಳೂರಿನ 3 ಕಡೆ ಇ.ಡಿ ದಾಳಿ ನಡೆಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ತಿರುವನಂತಪುರದಲ್ಲಿರುವ ಪಿಣರಾಯಿ ವಿಜಯನ್ ಅವರ ಬಾಡಿಗೆ ನಿವಾಸವೂ ಸೇರಿದಂತೆ ಕೇರಳದ ಒಟ್ಟು 10 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದೆ.
ಸಿಎಂಆರ್‌ಎಲ್ ಸಂಸ್ಥೆಯಿಂದ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಮಾಲೀಕತ್ವದ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಕಂಪನಿಗೆ ನೀಡಲಾಗಿದೆ ಎನ್ನಲಾದ 1.72 ಕೋಟಿ ಪಾವತಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. 2018ರಿಂದ 2019ರ ಅವಧಿಯಲ್ಲಿ ಯಾವುದೇ ಸೇವೆ ಒದಗಿಸದಿದ್ದರೂ ಸಿಎಂಆರ್‌ಎಲ್ ಸಂಸ್ಥೆ ಎಕ್ಸಾಲಾಜಿಕ್ ಸೊಲ್ಯೂಷನ್ಸ್‌ಗೆ ಅಕ್ರಮವಾಗಿ 1.72 ಕೋಟಿ ರೂ. ಪಾವತಿಸಿದೆ ಎಂಬ ಆರೋಪ ಕೇಳಿಬಂದಿದೆ.

