ನವದೆಹಲಿ: ಆಫ್ರಿಕಾದ ಕೆಲವು ಭಾಗಗಳಲ್ಲಿ ಎಬೋಲಾ ವೈರಸ್ ಭೀತಿ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತನ್ನ ನಾಗರಿಕರಿಗೆ ತುರ್ತು ಪ್ರಯಾಣ ಮುನ್ನೆಚ್ಚರಿಕೆಯನ್ನು ಹೊರಡಿಸಿದೆ.

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡ ಮತ್ತು ದಕ್ಷಿಣ ಸುಡಾನ್ ದೇಶಗಳಿಗೆ ಅತ್ಯಗತ್ಯವಲ್ಲದ ಅನಗತ್ಯ ಪ್ರಯಾಣವನ್ನು ಸಂಪೂರ್ಣವಾಗಿ ತಪ್ಪಿಸುವಂತೆ ಭಾರತೀಯರಿಗೆ ಸೂಚಿಸಲಾಗಿದೆ .

ವಿಶ್ವ ಆರೋಗ್ಯ ಸಂಸ್ಥೆಯು ಈ ಎಬೋಲಾ ಹರಡುವಿಕೆಯನ್ನು ‘ಅಂತರರಾಷ್ಟ್ರೀಯ ಕಳಕಳಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಿಸಿದ ಬೆನ್ನಲ್ಲೇ ಭಾರತ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಆಫ್ರಿಕನ್ ದೇಶಗಳಲ್ಲಿ ಹರಡುತ್ತಿರುವುದು ಎಬೋಲಾ ವೈರಸ್‌ನ ಅತ್ಯಂತ ಅಪಾಯಕಾರಿ ತಳಿಯಾದ ‘ಬುಂಡಿಬುಗ್ಯೊ ಸ್ಟ್ರೈನ್’ ಆಗಿದೆ. ಈ ವೈರಸ್ ರೂಪಾಂತರಿಯು ಪ್ರಸ್ತುತ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಗಾಂಡಾದ ಹಲವು ಪ್ರಾಂತ್ಯಗಳಲ್ಲಿ ತೀವ್ರವಾಗಿ ಹರಡುತ್ತಿದ್ದು, ಹತ್ತಾರು ಜೀವಗಳನ್ನು ಬಲಿಪಡೆದಿದೆ.

ಪೀಡಿತ ದೇಶಗಳಿಂದ ಭಾರತಕ್ಕೆ ಬರುವ ಅಥವಾ ಆ ದೇಶಗಳ ಮಾರ್ಗವಾಗಿ ಪ್ರಯಾಣಿಸಿ ಬರುವ ಎಲ್ಲಾ ಪ್ರಯಾಣಿಕರನ್ನು ದೇಶದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆಗೆ ಒಳಪಡಿಸಲು ನಿರ್ದೇಶಿಸಲಾಗಿದೆ. ಪ್ರಯಾಣಿಕರಿಗೆ ಜ್ವರ, ತೀವ್ರ ತಲೆನೋವು, ಸ್ನಾಯು ನೋವು ಅಥವಾ ವಾಂತಿಯಂತಹ ಎಬೋಲಾ ಲಕ್ಷಣಗಳಿದ್ದರೆ, ಅವರು ಇಮಿಗ್ರೇಷನ್ ಕೌಂಟರ್‌ ತಲುಪುವ ಮುನ್ನವೇ ವಿಮಾನ ನಿಲ್ದಾಣದ ವೈದ್ಯಕೀಯ ಹೆಲ್ಪ್ ಡೆಸ್ಕ್‌ಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.