ಅಹಮದಾಬಾದ್: ಗುಜರಾತ್‌ನ ಕಛ್‌ ಜಿಲ್ಲೆಯಲ್ಲಿ ಇಂದು (ಸೋಮವಾರ) ಬೆಳಿಗ್ಗೆ ಭೂಕಂಪ ಸಂಭವಿಸಿದೆ. ಬೆಳಿಗ್ಗೆ 10.05ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.3 ತೀವ್ರತೆ ದಾಖಲಾಗಿದೆ ಎಂದು ಗಾಂಧಿನಗರದ ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ದೃಢಪಡಿಸಿದೆ.

ಯಾವುದೇ ಸಾವು–ನೋವು ಸಂಭವಿಸಿದ ವರದಿಯಾಗಿಲ್ಲ. ರಾಜ್ಯದಲ್ಲಿ ಈ ತಿಂಗಳಿನಲ್ಲಿ ಸೌರಾಷ್ಟ್ರ-ಕಛ್ ಪ್ರದೇಶದಲ್ಲಿ ದಾಖಲಾದ 3ಕ್ಕಿಂತ ಹೆಚ್ಚು ತೀವ್ರತೆಯ ನಾಲ್ಕನೇ ಕಂಪನ ಇದಾಗಿದೆ. ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಾರ, 200 ವರ್ಷಗಳಲ್ಲಿ ರಾಜ್ಯದಲ್ಲಿ 9 ಪ್ರಮುಖ ಭೂಕಂಪಗಳು ಸಂಭವಿಸಿವೆ. 2001ರ ಕಛ್‌ನಲ್ಲಿ ಸಂಭವಿಸಿದ ಭೂಕಂಪವು ಭಾರತದಲ್ಲಿ ಸಂಭವಿಸಿದ 3ನೇ ಅತಿ ದೊಡ್ಡ ಭೂಕಂಪವಾಗಿದೆ ಎಂದಿದೆ.