ಲಕ್ನೋ: ರಾಮಮಂದಿರ ದೇಣಿಗೆ ವಿವಾದದ ನಡುವೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್‌ ಗಂಭೀರ ಆರೋಪ ಮಾಡಿದ್ದಾರೆ.

ಸಮಾಜವಾಧಿ ಪಕ್ಷವು ತನ್ನ ಅಧಿಕಾರ ಅವಧಿಯಲ್ಲಿ ದೇವಾಲಯಗಳನ್ನ ಸ್ವಾಧೀನ ಪಡಿಸಿಕೊಳ್ಳುತ್ತಿತ್ತು. ಜೊತೆಗೆ ದೇವಾಲಯದ ದೇಣಿಗೆಗಳನ್ನ ಮಸೀದಿಗಳ ಗೋಡೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

ಅಯೋಧ್ಯೆಯಲ್ಲಿ ಇಂದು ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಸಮಾಜವಾಧಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಹಾಗೂ ಸಮಾಜವಾಧಿ ಪಕ್ಷಗಳು ರಾಮನ ಸತ್ಯಾಸತ್ಯತೆಯನ್ನು ಪ್ರಶ್ನಿಸುತ್ತಿವೆ. ಅಯೋಧ್ಯೆಯ ಅಭಿವೃದ್ಧಿಯನ್ನ ವಿರೋಧಿಸುತ್ತಿವೆ.

ಸಮಾಜವಾಧಿ ಪಕ್ಷವು ತನ್ನ ಅಧಿಕಾರ ಅವಧಿಯಲ್ಲಿ ರಾಜ್ಯದ ದೇವಾಲಯಗಳ ಸಂಪನ್ಮೂಲವನ್ನ ದುರುಪಯೋಗಪಡಿಸಿಕೊಂಡಿದೆ. ಎಸ್ಪಿ ಪಕ್ಷವು ದೇವಾಲಯಗಳನ್ನ ಸ್ವಾಧೀನಪಡಿಸಿಕೊಳ್ಳುತ್ತಿತ್ತು, ಭಕ್ತರು ನೀಡಿದ ದೇಣಿಗೆಗಳನ್ನ ಮಸೀದಿ ಗೋಡೆಗಳ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿತ್ತು ಎಂದು ಕಿಡಿ ಕಾರಿದ್ದಾರೆ.

ಇದೇ ವೇಳೆ ಅಯೋಧ್ಯೆಯ ಹನುಮಂಗಡಿ ಮೆಟ್ಟಿಲುಗಳ ಮೇಲೆ ನಮಾಜ್‌ಗೆ ಯತ್ನಿಸಿದ್ದ ಪ್ರಸಂಗ ಉಲ್ಲೇಖಿಸಿ ಮಾತನಾಡಿದರು. ಈಗ ಶ್ರೀರಾಮ ಮತ್ತು ನಂಬಿಕೆಯ ಬಗ್ಗೆ ಮಾತನಾಡುತ್ತಿರುವ ಜನರು, ಹನುಮಂಗಡಿ ಮೆಟ್ಟಿಲುಗಳ ಮೇಲೆ ನಮಾಜ್ ಮಾಡಲು ಪ್ರಯತ್ನಿಸಿದ್ದರು. 2003 ರಲ್ಲಿ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ, ಹನುಮಂಗಡಿ ದೇವಾಲಯದ ಬಳಿ ರಂಜಾನ್ ಪ್ರಾರ್ಥನೆ ಮತ್ತು ಇಫ್ತಾರ್ ಆಯೋಜಿಸುವ ಪ್ರಯತ್ನ ನಡೆದಿತ್ತು ಎಂದು ಹೇಳಿದ್ದಾರೆ.

ಜಾಮಾ ಮಸೀದಿಯೊಳಗೆ ಯಾರಾದರೂ ಹನುಮಾನ್ ಚಾಲೀಸಾ ಪಠಿಸಲು ಬಿಡ್ತಾರಾ? ಯಾವುದೇ ಸರ್ಕಾರ ಅದನ್ನ ಮಾಡಲು ಸಾಧ್ಯವೇ? ಕಾಂಗ್ರೆಸ್ ಅಥವಾ ಸಮಾಜವಾದಿ ಪಕ್ಷ ಅದನ್ನು ಮಾಡಲು ಸಾಧ್ಯವೇ? ಮಸೀದಿಯಲ್ಲಿ ಹನುಮಾನ್‌ ಚಾಲೀಸಾ ಪಠಿಸಲು ಸಾಧ್ಯವಾಗದಿದ್ದರೆ, ಈ ಕೃತ್ಯವನ್ನು ಏಕೆ ಅನುಮತಿಸಲಾಯಿತು? ಹನುಮಂಗಡಿ ಮೆಟ್ಟಿಲುಗಳ ಮೇಲೆ ಏಕೆ ನಮಾಜ್‌ ಮಾಡಲಾತ್ತು ಅಂತ ಪ್ರಶ್ನೆಗಳ ಮಳೆ ಸುರಿಸಿದ್ದಾರೆ.

ಅಯೋಧ್ಯೆಯ ಅಭಿವೃದ್ಧಿಯನ್ನು ವಿಪಕ್ಷಗಳು ವಿರೋಧಿಸುತ್ತಲೇ ಬಂದಿವೆ. ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವಾಗಲೂ ವಿರೋಧಿಸಿದ್ರು. ಬಂದ ಮೇಲೆ ಅದಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಟ್ಟಿದ್ದೂ ಕೂಡ ಅವರಿಗೆ ಸಹಿಸಲಾಗುತ್ತಿಲ್ಲ ಕುಟುಕಿದ್ದಾರೆ.