ಕೇರಳ: ವಯನಾಡ್‌ನಲ್ಲಿ ಭಯಾನಕ ಭೂಕುಸಿತ ಉಂಟಾಗಿದೆ. ಈಗಾಗಲೇ ಸಾವಿನ ಸಂಖ್ಯೆ 63ಕ್ಕೆ ಏರಿಕೆಯಾಗಿದೆ. ಸಂತ್ರಸ್ತರ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಕಳೆದ 24 ಗಂಟೆಗಳಲ್ಲಿ ಭೀಕರ ಮಳೆ ಸುರಿದ ಪರಿಣಾಮ ಬೊಜ್ಜು ಭೂಮಿ ಕತ್ತರಿಸಿಕೊಂಡು ಬಿದ್ದಿದೆ. ಕೇರಳದ ವಯನಾಡು ಜಿಲ್ಲೆಯಲ್ಲಿ ನಿರಂತರ 24 ಗಂಟೆ ಸುರಿದ ಮಳೆ ಇಂದು ಮುಂಜಾನೆ ವೇಳೆಗೆ ಅಲ್ಪ ವಿರಾಮ ಘೋಷಿಸಿದೆ. ವಯನಾಡು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 30 ರಿಂದ 40 ಸೆಂಟಿ ಮೀಟರ್‌ನಷ್ಟು ಭಾರೀ ಮಳೆಯಾಗಿದೆ.

ಪಡಿಜರತರ ಪ್ರದೇಶದಲ್ಲಿ ಸುರಿದ ಮಳೆ 333 ಮಿಲಿ ಮೀಟರ್​ನಷ್ಟು ವೈತ್ರಿ ಪ್ರದೇಶದಲ್ಲಿ 280 ಮಿಲಿ ಮೀಟರ್​ನಷ್ಟು ಕಳೆದ 24 ಗಂಟೆಗಳಲ್ಲಿ ಸುರಿದರೆ ತರೋಡಿ ಪ್ರದೇಶದಲ್ಲಿ ಸುರಿದಿದ್ದು 234 ಮಿಲಿಮೀಟರ್​ನಷ್ಟು ಮಳೆ ಕಲಪೆಟ್ಟಾ ಪ್ರದೇಶದಲ್ಲಿ 200 ಮಿಲಿ ಮೀಟರ್​ನಷ್ಟು ರೌದ್ರ ಮಳೆ ನಿರಂತರವಾಗಿ ಬಿದ್ದಿದೆ.

ನಿರಂತರ ಸುರಿದ ಮೃತ್ಯು ಮಳೆಯಿಂದಾಗಿ ಈ ರೀತಿಯಾದ ಭೀಕರ ಭೂಕುಸಿತ ಉಂಟಾಗಿದೆ. ಕೇರಳದ ವಯನಾಡ್​ನಲ್ಲಿ ಇನ್ನೂ ಕೂಡ ಯಾವುದೂ ನಿಯಂತ್ರಣಕ್ಕೆ ಬಂದಿಲ್ಲ. 250ಕ್ಕೂ ಹೆಚ್ಚು ಜನ ಇನ್ನೂ ಸಂಕಷ್ಟದಲ್ಲಿಯೇ ಸಿಲುಕಿದ್ದಾರೆ.

ಜನರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈಗಾಗಲೇ 2 ಹೆಲಿಕಾಪ್ಟರ್​ಗಳನ್ನು ನಿಯೋಜನೆ ಮಾಡಲಾಗಿದೆ. ಸೇನೆಯಿಂದ 200 ಮಂದಿ ಸೈನಿಕರು ಹಾಗೂ ವೈದ್ಯರ ತಂಡವನ್ನು ನಿಯೋಜನೆ ಮಾಡಲಾಗಿದೆ. ಎನ್​ಡಿಆರ್​ಎಫ್ ತಂಡ ಈಗಾಗಲೇ ಸ್ಥಳದಲ್ಲಿ ಬೀಡು ಬಿಟ್ಟಿವೆ. ಒಟ್ಟು ನಾಲ್ಕು ಎನ್​​ಡಿಆರ್​ಎಫ್ ತಂಡವನ್ನು ಈಗಾಗಲೇ ವಯನಾಡ್​​ಗೆ ರವಾನೆ ಮಾಡಲಾಗಿದೆ.