ನವದೆಹಲಿ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಹರಿಯಾಣದ ಅಶೋಕ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ (ಅಸೋಸಿಯೇಟ್‌ ಪ್ರೊಫೆಸರ್‌) ಅಲಿ ಖಾನ್ ಮೊಹ್ಮದಾಬಾದ್ ಅವರನ್ನು ಬಂಧಿಸಲಾಗಿದೆ.

‘ಆಪರೇಷನ್ ಸಿಂಧೂರ’ ಕುರಿತಾದ ಅಲಿ ಖಾನ್ ಹೇಳಿಕೆಗಳು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳನ್ನು ದುರ್ಬಲಗೊಳಿಸುವುದರ ಜತೆಗೆ ಕೋಮು ಸಂಘರ್ಷವನ್ನು ಹುಟ್ಟುಹಾಕುತ್ತವೆ ಎಂದು ಆಕ್ರೋಶ ಹೊರಹಾಕಿದ್ದ ಹರಿಯಾಣದ ರಾಜ್ಯ ಮಹಿಳಾ ಆಯೋಗವು, ನೋಟಿಸ್ ಜಾರಿ ಮಾಡಿತ್ತು.

ರಾಜ್ಯ ಮಹಿಳಾ ಆಯೋಗದ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಮೊಹ್ಮದಾಬಾದ್, ‘ಆಪರೇಷನ್ ಸಿಂಧೂರ’ ಕುರಿತು ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗಳಲ್ಲಿ ಮಹಿಳಾ ಅಧಿಕಾರಿಗಳನ್ನು ದ್ವೇಷಿಸಿಲ್ಲ’ ಎಂದು ಸಮರ್ಥಿಸಿಕೊಂಡಿದ್ದರು.