ಕಾಸರಗೋಡು: ಶಬರಿಮಲೆ ಕ್ಷೇತ್ರ ಯಾತ್ರೆ ಸಂದರ್ಭದಲ್ಲಿ ಕಾಸರಗೋಡು ನಿವಾಸಿಗಳಾದ ಅಯ್ಯಪ್ಪ ಭಕ್ತರನ್ನು ವಂಚಿಸಿ ಹಣ ಲಪಟಾಯಿಸಿದ ಪ್ರಕರಣದಲ್ಲಿ ಇಬ್ಬರು ಡೋಲಿ ಕಾರ್ಮಿಕರನ್ನು ಪಂಪಾ ಪೊಲೀಸರು ಬಂಧಿಸಿದ್ದಾರೆ.

ಇಡುಕ್ಕಿ ಪೀರುಮೇಡ್‌ ರಾಣಿಕೋವಿಲ್‌ ಎಸ್ಟೇಟ್‌ ನಿವಾಸಿಗಳಾದ ಕಣ್ಣನ್‌ (31), ರಘು ಆರ್‌. (27) ಬಂಧಿತ ಆರೋಪಿಗಳು. ತುಲಾ ಮಾಸ ಪೂಜೆಗಾಗಿ ಅಕ್ಟೋಬರ್‌18ರಂದು ಶಬರಿಮಲೆ ಕ್ಷೇತ್ರ ತಲುಪಿದ ಕಾಸರಗೋಡು ನಿವಾಸಿಗಳು ಒಳಗೊಂಡ ತಂಡವನ್ನು ಆರೋಪಿಗಳು ವಂಚಿಸಿದ್ದಾರೆ.

ಮಧ್ಯಾಹ್ನ 12 ಗಂಟೆ ವೇಳೆ ಭಕ್ತರ ಸಂದಣಿ ಹೆಚ್ಚಿರುವ ಸಮಯದಲ್ಲಿ ಕಾಸರಗೋಡು ನಿವಾಸಿಗಳನ್ನು ಸಂಪರ್ಕಿಸಿದ ಆರೋಪಿಗಳಾದ ಡೋಲಿ ಕಾರ್ಮಿಕರು ಹಣ ಒದಗಿಸಿದರೆ ಕ್ಯೂನಲ್ಲಿ ನಿಲ್ಲದೆ ನೇರವಾಗಿ ಕ್ಷೇತ್ರ ದರ್ಶನ ವ್ಯವಸ್ಥೆ ಒದಗಿಸುವುದಾಗಿ ನಂಬಿಸಿ ಕಾಸರಗೋಡು ನಿವಾಸಿಗಳಿಂದ 10 ಸಾವಿರ ರೂಪಾಯಿಗಳನ್ನು ಆರೋಪಿಗಳು ಪಡೆದುಕೊಂಡಿದ್ದರು. ಬಳಿಕ ತೀರ್ಥಾಟಕರನ್ನು ವಾವರ ನಡೆ ಸಮೀಪಕ್ಕೆ ತಲುಪಿಸಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.