ತಿರುಪತಿ: ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟೋಕನ್ ರಹಿತ ಭಕ್ತರಿಗೆ ಲಡ್ಡುಗಳ ಮಾರಾಟಕ್ಕೆ ಆಧಾರ್ ದೃಢೀಕರಣವನ್ನು ಪರಿಚಯಿಸಿದೆ. ಲಡ್ಡು ಮಾರಾಟವನ್ನು ಹೆಚ್ಚು ಪಾರದರ್ಶಕಗೊಳಿಸುವ ಉದ್ದೇಶದಿಂದ ಈ ಹೊಸ ವ್ಯವಸ್ಥೆ ಗುರುವಾರದಿಂದ ಜಾರಿಗೆ ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ಉದ್ದೇಶಿಸಿ ಮಾತನಾಡಿದ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ ವೆಂಕಯ್ಯ ಚೌಧರಿ, ಸಾಮಾನ್ಯ ಭಕ್ತರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವು ಮಧ್ಯವರ್ತಿಗಳು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಕಾಳಸಂತೆಯಲ್ಲಿ ಲಡ್ಡುಗಳನ್ನು ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ಇದನ್ನು ನಿಲ್ಲಿಸಲು, ದರ್ಶನ ಟೋಕನ್ ಇಲ್ಲದ ಭಕ್ತರು ಎರಡು ಲಡ್ಡುಗಳನ್ನು ಪಡೆಯಲು ಲಡ್ಡು ಕೌಂಟರ್‌ಗಳಲ್ಲಿ ತಮ್ಮ ಆಧಾರ್ ಕಾರ್ಡ್ ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ. ದರ್ಶನಕ್ಕೆ ಟಿಕೆಟ್​ ಕೊಳ್ಳದೇ 48- 62ನೇ ಕೌಂಟರ್ ​ನಿಂದ ಬರುವ ಭಕ್ತರಿಗೆ ಇದು ಅನ್ವಯಿಸಲಿದೆ. ಅವರು, ತಮ್ಮ ಆಧಾರ್​ ದೃಢೀಕರಣ ಮಾಡಿ, ಒಬ್ಬ ಭಕ್ತರು ಎರಡು ಲಡ್ಡುವನ್ನು ಕೊಳ್ಳಬಹುದಾಗಿದೆ ಎಂದು ತಿಳಿಸಿದರು.