ನವದೆಹಲಿ: ದಕ್ಷಿಣ ದೆಹಲಿಯ ಶಾಂತಿ ನಿಕೇತನ್‌ ಪ್ರದೇಶದಲ್ಲಿ ಐದು ಮಹಡಿಗಳ ಪಿ.ಜಿ ಕಟ್ಟಡ ಕುಸಿದು ಬಿದ್ದಿದೆ. ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅವಶೇಷಗಳ ಅಡಿಯಲ್ಲಿ 15ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡ ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

‘ಗಾಯಗೊಂಡಿದ್ದ 11 ಮಂದಿಯನ್ನು ಇಲ್ಲಿನ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್‌) ತುರ್ತು ನಿಗಾ ವಿಭಾಗಕ್ಕೆ ದಾಖಲಿಸಲಾಗಿತ್ತು. ಅವರಲ್ಲಿ ಐದು ಮಂದಿ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಏಮ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಕಟ್ಟಡದ ಮಾಲೀಕ ಹರಿರಾಮ್‌ ವಿರುದ್ಧ ಉದ್ದೇಶಪೂರ್ವಕವಲ್ಲದ ನರಹತ್ಯೆ, ಕಟ್ಟಡ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಇತರರ ಸುರಕ್ಷತೆಗೆ ಅಪಾಯ ಉಂಟು ಮಾಡಿದ ಆರೋಪಗಳ ಮೇಲೆ ದಕ್ಷಿಣ ಕ್ಯಾಂಪಸ್‌ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ಕಟ್ಟಡದಲ್ಲಿ ಯುವಕರ ಪಿ.ಜಿ ನಡೆಸಲಾಗುತ್ತಿತ್ತು. 450 ಚದರ ಅಡಿ ವಿಸ್ತೀರ್ಣದಲ್ಲಿ ಎರಡು ಮಹಡಿ ನಿರ್ಮಾಣಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು. ಹೆಚ್ಚುವರಿಯಾಗಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡದ ಕೆಳಮಹಡಿಯಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದ ವೇಳೆ, ಇಡೀ ಕಟ್ಟಡವೇ ಕುಸಿದುಬಿದ್ದಿದೆ. ಆರೋಪಿಯ ಬಂಧನಕ್ಕೆ ಹಲವು ತಂಡಗಳನ್ನು ರಚಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕಟ್ಟಡಕ್ಕೆ ಹೊಂದಿಕೊಂಡಿರುವ ದೆಹಲಿ ವಿಶ್ವವಿದ್ಯಾಲಯ, ಮೋತಿಲಾಲ್‌ ನೆಹರೂ ಕಾಲೇಜು, ಆತ್ಮರಾಮ್‌ ಸನಾತನ್‌ ಧರ್ಮ ಕಾಲೇಜು ಸೇರಿದಂತೆ ಸುತ್ತಲೂ ಓದುತ್ತಿದ್ದ ಕೇರಳಂ, ಹರಿಯಾಣ, ಉತ್ತರ ‍ಪ್ರದೇಶದ ವಿದ್ಯಾರ್ಥಿಗಳೇ ಇಲ್ಲಿ ತಂಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

— ANI (@ANI) September 7, 2026