ನವದೆಹಲಿ: ದೆಹಲಿಯಲ್ಲಿ ನಡೆದ ಕಾರ್ ಸ್ಫೋಟ ಪ್ರಕರಣ ಇಡೀ ನಗರವನ್ನೇ ಆಘಾತಕ್ಕೆ ದೂಡಿದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ. ಸೋಮವಾರ (ನ.10) ಸಂಜೆ ಸಂಭವಿಸಿದ ಕಾರು ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಘೋಷಿಸಲಾಗಿದೆ.

ಈ ದುರಂತದಲ್ಲಿ ಇದುವರೆಗೂ ಲಭ್ಯವಾದ ಮಾಹಿತಿಯ ಪ್ರಕಾರ 13 ಜನರು ಸಾವನ್ನಪ್ಪಿದ್ದಾರೆ. ಈ ಕಷ್ಟದ ಸಮಯದಲ್ಲಿ, ದೆಹಲಿ ಸರ್ಕಾರ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಮತ್ತು ಈ ಘಟನೆಯಲ್ಲಿ ಗಾಯಗೊಂಡವರಿಗೆ ತನ್ನ ಸಂತಾಪವನ್ನು ವ್ಯಕ್ತಪಡಿಸುತ್ತದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ತಿಳಿಸಿದ್ದಾರೆ.

ಈ ಸ್ಫೋಟದಲ್ಲಿ ಜೀವ ಕಳೆದುಕೊಂಡವರಿಗೆ ₹10 ಲಕ್ಷ, ಘಟನೆಯಲ್ಲಿ ಶಾಶ್ವತವಾಗಿ ಅಂಗವಿಕಲರಾದವರಿಗೆ ₹5 ಲಕ್ಷ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ₹2 ಲಕ್ಷ ಆರ್ಥಿಕ ನೆರವು ನೀಡುವುದಾಗಿ ರೇಖಾ ಗುಪ್ತಾ ಘೋಷಿಸಿದ್ದಾರೆ.