ಥಿಂಪೂ: ದೆಹಲಿಯ ಕೆಂಪು ಕೋಟೆಯ ಸಮೀಪ ನಡೆದ ಕಾರ್ ಬಾಂಬ್ ಸ್ಫೋಟದ ಸಂಚುಕೋರರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ ಎಂದು ಪ್ರಧಾನಿ ಮೋದಿ ಪ್ರತಿಜ್ಞೆ ಮಾಡಿದ್ದಾರೆ.
ಪ್ರಧಾನಿ ಮೋದಿ ಎರಡು ದಿನಗಳ ರಾಜ್ಯ ಭೇಟಿಗಾಗಿ ನೆರೆಯ ಭೂತಾನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಇಂದು (ನ.11) ಅವರು ರಾಜಧಾನಿ ಥಿಂಫುವಿನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಭೂತಾನ್–ಭಾರತ ಸಂಬಂಧಗಳ ಕುರಿತು ಮಾತನಾಡುತ್ತಾ, ಪ್ರಧಾನಿ ಮೋದಿ ದೆಹಲಿಯಲ್ಲಿ ನಡೆದ ಕಾರು ಬಾಂಬ್ ಸ್ಫೋಟದ ಬಗ್ಗೆಯೂ ಪ್ರಸ್ತಾಪಿಸಿದರು.
ಇಂದು ನಾನು ಇಲ್ಲಿಗೆ (ಭೂತಾನ್‌ಗೆ) ತುಂಬಾ ದುಃಖಿತ ಹೃದಯದಿಂದ ಬಂದಿದ್ದೇನೆ. ನಿನ್ನೆ ಸಂಜೆ ದೆಹಲಿಯಲ್ಲಿ ಸಂಭವಿಸಿದ ಭಯಾನಕ ಘಟನೆ ಎಲ್ಲರನ್ನೂ ತೀವ್ರವಾಗಿ ದುಃಖಿಸಿದೆ. ಸಂತ್ರಸ್ತ ಕುಟುಂಬಗಳ ದುಃಖವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇಡೀ ರಾಷ್ಟ್ರವು ಇಂದು ಅವರೊಂದಿಗೆ ನಿಂತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಘಟನೆಯ ಹಿಂದಿನ ಪಿತೂರಿಗಾರರನ್ನು ಬಿಡಲಾಗುವುದಿಲ್ಲ ಮತ್ತು ಇದರ ಹಿಂದೆ ಇರುವ ಎಲ್ಲರನ್ನೂ ನ್ಯಾಯದ ಮುಂದೆ ತರಲಾಗುವುದು. ಈ ಘಟನೆಯ ತನಿಖೆ ನಡೆಸುತ್ತಿರುವ ಎಲ್ಲಾ ಸಂಸ್ಥೆಗಳೊಂದಿಗೆ ನಾನು ನಿನ್ನೆ ರಾತ್ರಿಯಿಡೀ ಸಂಪರ್ಕದಲ್ಲಿದ್ದೆ. ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಭೇದಿಸುತ್ತವೆ. ಇದರ ಹಿಂದಿನ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ಎಲ್ಲ ಹೊಣೆಗಾರರನ್ನು ನ್ಯಾಯದ ಕಟಕಟೆಗೆ ತರಲಾಗುವುದು ಎಂದು ಅವರು ಹೇಳಿದರು.

