ತಿರುವನಂತಪುರಂ: ಈ ವರ್ಷ ಶಬರಿಮಲೆ ಯಾತ್ರಾರ್ಥಿಗಳಿಗೆ ಆನ್‌ಲೈನ್ ಬುಕ್ಕಿಂಗ್ ಮೂಲಕ ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲಾಗುವುದು. ಮತ್ತು ದಿನಕ್ಕೆ ಗರಿಷ್ಠ 80,000 ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಕೇರಳ ಸರ್ಕಾರ ಶನಿವಾರ(ಅಕ್ಟೋಬರ್​ 5) ಹೇಳಿದೆ.

ಇನ್ನೊಂದು ತಿಂಗಳಲ್ಲಿ ಮಕರವಿಳಕ್ಕು ಸೀಸನ್ ಆರಂಭವಾಗಲಿರುವಾಗ ಈ ನಿರ್ಧಾರವನ್ನು ಬಹಿರಂಗಪಡಿಸಲಾಗಿದೆ. ವರ್ಚುವಲ್ ಕ್ಯೂ ಬುಕಿಂಗ್ ಸಮಯದಲ್ಲಿ ಪ್ರಯಾಣದ ಮಾರ್ಗವನ್ನು ಆಯ್ಕೆ ಮಾಡಲು ಅವಕಾಶವನ್ನು ಒದಗಿಸಲಾಗುತ್ತದೆ. ಹೀಗಾಗಿ ಯಾತ್ರಾರ್ಥಿಗಳು ಕಡಿಮೆ ಜನಸಂದಣಿ ಇರುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಸಿಎಂಒ ಹೇಳಿಕೆಯಲ್ಲಿ ತಿಳಿಸಿದೆ.

ಮಕರವಿಳಕ್ಕು ಕಾಲದಲ್ಲಿ ಭಕ್ತರ ದಂಡು ಅಧಿಕವಾಗಿರುತ್ತದೆ. ಅದಕ್ಕಾಗಿ ರಾಜ್ಯ ಸರ್ಕಾರ ಮೊದಲೇ ಮುಂಜಾಗ್ರತಾ ಕ್ರಮಕೈಗೊಂಡಿರುವಂತಿದೆ. ಅರಣ್ಯ ಮಾರ್ಗದಲ್ಲಿ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾರ್ಕಿಂಗ್ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಲಾಗಿದೆ ಎನ್ನಲಾಗಿದೆ. ನಿಲಕ್ಕಲ್ ಮತ್ತು ಎರುಮೇಲಿಯಲ್ಲಿ ವಾಹನ ನಿಲುಗಡೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಶಬರಿಮಲೆಗೆ ಹೋಗುವ ಮಾರ್ಗದ ರಸ್ತೆ ನಿರ್ವಹಣಾ ಕಾಮಗಾರಿ ಹಾಗೂ ಸುತ್ತಮುತ್ತ ವಾಹನ ನಿಲುಗಡೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಪಾದಯಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಲು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ದೇವಸ್ವಂ ಇಲಾಖೆ ಸಚಿವ ವಿ.ಎನ್.ವಾಸವನ್, ಮುಖ್ಯ ಕಾರ್ಯದರ್ಶಿ ಶಾರದ ಮುರಳೀಧರನ್, ರಾಜ್ಯ ಪೊಲೀಸ್ ಮುಖ್ಯಸ್ಥ ಶೇಖ್ ದರ್ವೇಶ್ ಸಾಹಿಬ್, ಎಡಿಜಿಪಿಗಳಾದ ಮನೋಜ್ ಅಬ್ರಹಾಂ, ಎಸ್.ಶ್ರೀಜಿತ್, ದೇವಸ್ವಂ ವಿಶೇಷ ಕಾರ್ಯದರ್ಶಿ ಟಿ.ವಿ.ಅನುಪಮಾ, ಪತ್ತನಂತಿಟ್ಟ ಜಿಲ್ಲಾಧಿಕಾರಿ ಎಸ್.ಪ್ರೇವಂ ಕೃಷ್ಣನ್, ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇತರರು ಹಾಜರಿದ್ದರು.(ಏಜೆನ್ಸೀಸ್​)