ಮುಂಬೈ: ಮಹಾರಾಷ್ಟ್ರ ಕೇಡರ್‌ನ ಐಎಎಸ್‌ ಅಧಿಕಾರಿ, ಅತಿಯಾದ ದರ್ಪ, ನಕಲಿ ದಾಖಲೆ ಸೃಷ್ಟಿಯಿಂದಲೇ ದೇಶಾದ್ಯಂತ ಗಮನ ಸೆಳೆದಿರುವ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್‌ ಅವರ ಕಳ್ಳಾಟಗಳು ಬಗೆದಷ್ಟೂ ಹೊರ ಬರುತ್ತಿದೆ. ಇತ್ತೀಚೆಗೆ ಅವರ ತಾಯಿಯ ವಿಚಾರದಲ್ಲೂ ಸುದ್ದಿಯಾಗಿತ್ತು. ಇದೀಗ ಅವರ ಮತ್ತೊಂದು ಕಳ್ಳಾಟ ಬಯಲಾಗಿದೆ.ಅವರು ಅಂಗವೈಕಲ್ಯ ಪ್ರಮಾಣಪತ್ರ ವನ್ನು ಪಡೆಯಲು ಸುಳ್ಳು ವಿಳಾಸ ಮತ್ತು ನಕಲಿ ಪಡಿತರ ಚೀಟಿಯನ್ನು ಬಳಸಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

ಪುಣೆಯ ಯಶವಂತರಾವ್ ಚವಾಣ್ ಸ್ಮಾರಕ ಆಸ್ಪತ್ರೆ 2022ರ ಆಗಸ್ಟ್ 24ರಂದು ಪೂಜಾಗೆ ಅಂಗವೈಕಲ್ಯ ಪ್ರಮಾಣಪತ್ರವನ್ನು ನೀಡಿದೆ. ಅದರಲ್ಲಿ ಪೂಜಾ ಖೇಡ್ಕರ್ ಅವರ ವಿಳಾಸವನ್ನು ʼʼಪುಣೆ ಜಿಲ್ಲೆಯ ಪ್ಲಾಟ್ ಸಂಖ್ಯೆ 53, ದೇಹು ಅಲಂಡಿ ರಸ್ತೆ, ತಲವಾಡೆ, ಪಿಂಪ್ರಿ ಚಿಂಚ್ವಾಡ್” ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಸ್ಥಳದಲ್ಲಿ ಯಾವುದೇ ಮನೆ ಇಲ್ಲ. ಬದಲಾಗಿ ಥರ್ಮೋವರ್ಟಾ ಎಂಜಿನಿಯರಿಂಗ್ ಕಂಪನಿ ಎಂಬ ಕಾರ್ಖಾನೆ ಇದೆ. ಕುತೂಹಲಕಾರಿ ಸಂಗತಿಯೆಂದರೆ, ಕೆಂಪು-ನೀಲಿ ದೀಪವನ್ನು ಅಕ್ರಮವಾಗಿ ಬಳಸಿದ ನಂತರ ವಶಪಡಿಸಿಕೊಳ್ಳಲಾದ ಖೇಡ್ಕರ್ ಅವರ ಆಡಿ ಕಾರು ಈ ಕಂಪನಿಯ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ.

ಅಲ್ಲದೆ ಅಂಗವೈಕಲ್ಯ ಪ್ರಮಾಣಪತ್ರಗಳನ್ನು ಪಡೆಯಲು ಸರ್ಕಾರವು ಆಧಾರ್ ಕಾರ್ಡ್‌ ಅನ್ನು ಕಡ್ಡಾಯಗೊಳಿಸಿದ್ದರೂ ಪೂಜಾ ಅದರ ಬದಲು ಪಡಿತರ ಚೀಟಿ ಹಾಜರುಪಡಿಸಿದ್ದರು ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ನಕಲಿ ಪಡಿತರ ಚೀಟಿಯನ್ನು ತಯಾರಿಸಲು ಪೂಜಾ ನಕಲಿ ವಿಳಾಸವನ್ನು ಬಳಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಪೂಜಾ ಖೇಡ್ಕರ್ ಮೊಣಕಾಲಿನಲ್ಲಿ ಶೇ. 7ರಷ್ಟು ಅಂಗವೈಕಲ್ಯವನ್ನು ಹೊಂದಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.