ನವದೆಹಲಿ: ಕಳೆದ ತಿಂಗಳು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ದಾಖಲಾಗಿದ್ದ ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಉಸಿರಾಟದ ಬೆಂಬಲದಲ್ಲಿದ್ದಾರೆ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ.

ಸೀತಾರಾಂ ಯೆಚೂರಿ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದ್ದು, ತೀವ್ರ ಉಸಿರಾಟದ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಪಿಐ ಹೇಳಿಕೆಯಲ್ಲಿ ತಿಳಿಸಿದೆ. ಸೀತಾರಾಂ ಯೆಚೂರಿ ಅವರು ಉಸಿರಾಟದ ಬೆಂಬಲದಲ್ಲಿದ್ದಾರೆ. ವೈದ್ಯರ ತಂಡವು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಅವರ ಆರೋಗ್ಯ ಸ್ಥಿತಿ ಈ ಸಮಯದಲ್ಲಿ ಗಂಭೀರವಾಗಿದೆ ಎಂದು ಎಕ್ಸ್​ನಲ್ಲಿನ ಹೇಳಿಕೆಯಲ್ಲಿ ಸಿಪಿಐಎಂ ತಿಳಿಸಿದೆ.

ತೀವ್ರ ಜ್ವರದಿಂದ ಬಳಲುತ್ತಿದ್ದ ಸೀತಾರಾಂ ಯೆಚೂರಿ ಅವರನ್ನು ಆಗಸ್ಟ್ 19ರಂದು ಏಮ್ಸ್‌ನ ತುರ್ತು ವಿಭಾಗಕ್ಕೆ ದಾಖಲಿಸಲಾಗಿತ್ತು. ನ್ಯುಮೋನಿಯಾದ ಕಾರಣದಿಂದ ಸೀತಾರಾಂ ಯೆಚೂರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ. ಮೊದಲು ಅವರು ಚಿಕಿತ್ಸೆಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೋರಿಸಿದರು. ಅವರನ್ನು ಅಬ್ಸರ್ವೇಷನ್​ನಲ್ಲಿಡಲಾಗಿತ್ತು. ಆದರೆ ಗುರುವಾರ ಸೀತಾರಾಮ್ ಯೆಚೂರಿ ಅವರ ಆರೋಗ್ಯ ಹದಗೆಟ್ಟ ನಂತರ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ಅವರನ್ನು ಏಮ್ಸ್‌ನಲ್ಲಿ ದಾಖಲಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಯೆಚೂರಿ ಅವರು ಇತ್ತೀಚೆಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.