ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದು, ದೇಶವಾಸಿಗಳಲ್ಲಿ ಆತಂಕ ಮನೆಮಾಡುತ್ತಿದೆ. ದೇಶಾದ್ಯಂತ ಸಕ್ರಿಯ ಪ್ರಕರಣಗಳ ಸಂಖ್ಯೆ ನಿನ್ನೆ 3,395 ಇದ್ದು ಇಂದು 3,758 ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಆರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ನೆರೆಯ ರಾಜ್ಯ ಕೇರಳ ಇದ್ದು, ಗಡಿ ಪ್ರದೇಶದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿರುವ ರಾಜ್ಯಗಳು: ಕೇರಳ 1400, ಮಹಾರಾಷ್ಟ್ರ 485, ದೆಹಲಿ 436, ಗುಜರಾತ್ 320, ಪಶ್ಚಿಮ ಬಂಗಾಳ 287, ಕರ್ನಾಟಕ 238, ತಮಿಳುನಾಡು 199, ಉತ್ತರ ಪ್ರದೇಶ 149 ಪ್ರಕರಣ ಇದೆ.
ಇನ್ನು ಕರ್ನಾಟಕದಲ್ಲಿ ಕೋವಿಡ್ ಪಾಸಿಟಿವ್ ಹೊಂದಿದ್ದ 63 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರಿಗೆ ಪಲ್ಮನರಿ ಟಿಬಿ, ಬುಕ್ಕಲ್ ಲೋಳೆಪೊರೆಯ ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಸಮಸ್ಯೆಗಳೂ ಇದ್ದವು ಎಂದು ತಿಳಿದು ಬಂದಿದೆ. ಇನ್ನು ಕೇರಳದಲ್ಲಿ ಸೆಪ್ಸಿಸ್ ಅಧಿಕ ರಕ್ತದೊತ್ತಡ, ಡಿಸಿಎಲ್‌ಡಿ ಜೊತೆಗೆ ಕೋವಿಡ್ ಪಾಸಿಟಿವ್ ಹೊಂದಿದ್ದ 24 ವರ್ಷದ ಮಹಿಳೆಯ ಸಾವಾಗಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಒಂದೇ ವಾರದಲ್ಲಿ ದೇಶದಲ್ಲಿ 5 ಪಟ್ಟು ಕೊರೊನಾ ಕೇಸ್ ಹೆಚ್ಚಳವಾಗಿದೆ. ಕೇರಳ ರಾಜ್ಯದಲ್ಲಿ ವಿದೇಶಗಳಿಗೆ ಹೋಗಿ ಬರುವವರ ಸಂಖ್ಯೆ ಜಾಸ್ತಿ ಇರುವುದರಿಂದ ಅಲ್ಲಿ ಕೊರೊನಾ ಟೆಸ್ಟಿಂಗ್ ಕೂಡ ಹೆಚ್ಚಾಗಿ ಮಾಡಲಾಗುತ್ತಿದೆ. ಹೀಗಾಗಿ ಕೇರಳದಲ್ಲಿ ಕೊರೊನಾ ಸಕ್ರಿಯ ಕೇಸ್‌ಗಳು ಸ್ಫೋಟಗೊಂಡಿವೆ.

