ಚಂಡೀಗಢ: ಮನೆ ನೋಡಲು ಹೋಗಿದ್ದ ದಂಪತಿಗೆ ಪಿಟ್‌ಬುಲ್ ನಾಯಿ ದಾಳಿ ಮಾಡಿರುವ ಘಟನೆ ಪಂಜಾಬ್‌ನ ಪಟಿಯಾಲದ ಘುಮನ್ ನಗರದಲ್ಲಿ ನಡೆದಿದೆ.
ದಾಳಿಯ ಭಯಾನಕ CCTV ದೃಶ್ಯಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮಂಗಳವಾರ ಸಂಜೆ ಅಂಕಿತ್ ಸಭರ್ವಾಲ್ ಹಾಗೂ ಅವರ ಪತ್ನಿ ಶಿಫಾಲಿ ಬಾಡಿಗೆ ಮನೆ ನೋಡಲು ಮನೆ ಬ್ರೋಕರ್ ಜೊತೆ ಘುಮನ್ ನಗರಕ್ಕೆ ತೆರಳಿದ್ದಾರೆ. ಈ ವೇಳೆ ಮನೆಯ ಗೇಟ್ ತೆರೆಯುತ್ತಿದ್ದಂತೆ ಪಿಟ್‌ಬುಲ್ ನಾಯಿ ಏಕಾಏಕಿ ಹೊರಗೆ ಬಂದು ಶಿಫಾಲಿ ಮೇಲೆ ದಾಳಿ ಮಾಡಿದೆ.
ನಾಯಿ ಆಕೆಯ ತೋಳು, ಕಾಲು ಕಚ್ಚಿ ಗಾಯ ಮಾಡಿದೆ. ದೇಹದ ಹಲವು ಭಾಗಗಳಿಗೆ ತೀವ್ರವಾಗಿ ಕಚ್ಚಿದ್ದು, ಆಳವಾದ ಗಾಯಗಳಾಗಿವೆ. ಸದ್ಯ ಶಿಫಾಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ನಿಯನ್ನು ರಕ್ಷಿಸಲು ಮುಂದಾದ ಅಂಕಿತ್‌ಗೂ ನಾಯಿ ದಾಳಿ ಮಾಡಿದೆ. ಅವರ ಕಾಲು ಮತ್ತು ಬೆನ್ನಿನ ಭಾಗದಲ್ಲಿ ಗಾಯಗಳಾಗಿವೆ.
ದಂಪತಿ ನಾಯಿಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಾಳಿ ಮುಂದುವರೆಸಿದ್ದ ವೇಳೆ ನಾಲ್ಕು ಜನ ಸ್ಥಳೀಯರು ಕೋಲುಗಳನ್ನು ಹಿಡಿದು ನಾಯಿಯನ್ನು ಹೊಡೆದು ಬೆದರಿಸಿ, ತಡೆಯಲು ಪ್ರಯತ್ನಿಸಿದ್ದಾರೆ. ಕೆಲವರು ಹರಸಾಹಸಪಟ್ಟು ಗಾಯಗೊಂಡ ದಂಪತಿಯನ್ನು ನಾಯಿಯಿಂದ ದೂರಕ್ಕೆ ಎಳೆದುಕೊಂಡು ಹೋಗಿದ್ದಾರೆ.
ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ನಾಯಿಯನ್ನು ನಿಯಂತ್ರಣವಿಲ್ಲದೆ ಹೊರಗೆ ಬಿಡಲಾಗಿತ್ತು ಎಂದು ಆರೋಪಿಸಿರುವ ಅಂಕಿತ್, ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

