ಕೋಲ್ಕತ್ತಾ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ನಿವಾಸದ ಮೇಲೆ ಕೇಂದ್ರ ತನಿಖಾ ದಳ ಇಂದು ದಾಳಿ ನಡೆಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಇತರ 14 ಸ್ಥಳಗಳಲ್ಲಿಯೂ ಸಿಬಿಐ ಶೋಧ ನಡೆಸುತ್ತಿದೆ. ಕೋಲ್ಕತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ಆಗಸ್ಟ್ 9ರಂದು ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ ಸಿಬಿಐ ಈಗಾಗಲೇ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಕೋಲ್ಕತ್ತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ಪಶ್ಚಿಮ ಬಂಗಾಳ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ ವಿಚಾರಣೆ ನಡೆಸುತ್ತಿದೆ. ಸಿಬಿಐಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿಧಿವಿಜ್ಞಾನ ಔಷಧ ತಜ್ಞ ಡಾ.ದೇಬಶಿಶ್ ಸೋಮ್ ಅವರ ನಿವಾಸದಲ್ಲಿಯೂ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಉಪ ಅಧೀಕ್ಷಕ ಅಖ್ತರ್ ಅಲಿ ಅವರು ಮೂರು ದಿನಗಳ ಹಿಂದೆ ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ಧ ದೂರು ದಾಖಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ವಿವರ ಕಲೆ ಹಾಕಲಾಗುತ್ತಿದೆ. ಈ ಮಧ್ಯೆ ಕೋಲ್ಕತಾ ಪೊಲೀಸರು ಸರ್ಕಾರಿ ಸ್ವಾಮ್ಯದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಬಳಿ ನಿಷೇಧಾಜ್ಞೆಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದ್ದಾರೆ.

