ಗಾಂಧಿನಗರ: ಪಾಕಿಸ್ತಾನ ಮೂಲದ ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಐವರು ಶಂಕಿತ ಉಗ್ರರನ್ನು ಗುಜರಾತ್‌ನ ವಿವಿಧ ಜಿಲ್ಲೆಗಳಿಂದ ಗುಜರಾತ್ ಉಗ್ರನಿಗ್ರಹ ದಳ ಬಂಧಿಸಿದೆ.
ತನಿಖೆಯಲ್ಲಿ ಬಂಧಿತರಲ್ಲಿ ಒಬ್ಬ ಟೈಮ್ ಬಾಂಬ್ ತಯಾರಿಸುವ ಸಿದ್ಧತೆಯಲ್ಲಿ ತೊಡಗಿದ್ದ ಎಂಬುದು ಬಹಿರಂಗವಾಗಿದೆ. ಬಂಧಿತರನ್ನು ಬಿಲಾಲ್ ಅಬಿದ್ ಶೇರಾ, ಮೊಹಮ್ಮದ್ ಆಯೂಬ್ ಖಾಡಿವಾಲ್, ಮೊಹಮ್ಮದ್ ಶಾಪಿ ಮುಖಿ, ಮೊಹಮ್ಮದ್ ಹಸನ್ ಕರಾಡಿಯಾ ಮತ್ತು ಮೊಹಮ್ಮದ್ ಆಯೂಬ್ ಸುನಾಸರಾ ಎಂದು ಗುರುತಿಸಲಾಗಿದೆ.
ಬಂಧಿತರೆಲ್ಲರೂ ಪಾಕ್ ಮೂಲದ ಜೈಶ್ ಸಂಘಟನೆಯ ಸದಸ್ಯರಾಗಿದ್ದು, ಸ್ಫೋಟಕ ಸಾಧನಗಳನ್ನು ಪರೀಕ್ಷಿಸುವ ಕೃತ್ಯದಲ್ಲಿ ತೊಡಗಿದ್ದರು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ತಿಂಗಳ ಆರಂಭದಲ್ಲಿ ಎಟಿಎಸ್ ಈ ಪ್ರಕರಣ ಸಂಬಂಧ 8 ಮಂದಿಯನ್ನು ಬಂಧಿಸಿತ್ತು. ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಸಂಪರ್ಕಿಸಿ ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.
ಈ ಐವರು ಶಂಕಿತರನ್ನು ಈ ಹಿಂದೆ ಬಂಧಿಸಲಾಗಿದ್ದ ಉಗ್ರ ಘಟಕದ ಸದಸ್ಯರ ವಿಚಾರಣೆ ವೇಳೆ ದೊರೆತ ಮಾಹಿತಿಯ ಆಧಾರದ ಮೇಲೆ ಪತ್ತೆಹಚ್ಚಿ ಬಂಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ನ್ಯಾಯಾಲಯ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಕೇಂದ್ರ ಹಾಗೂ ರಾಜ್ಯ ಗುಪ್ತಚರ ಸಂಸ್ಥೆಗಳು ಉಗ್ರ ಜಾಲದ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕುತ್ತಿವೆ.
ಈ ಪ್ರಕರಣದಲ್ಲಿ ಈ ಹಿಂದೆ ನಡೆದ ತನಿಖೆಯಲ್ಲಿ ಬಂಧಿತರಿಗೆ ಪಾಕಿಸ್ತಾನದಲ್ಲಿರುವ ಅವರ ಹ್ಯಾಂಡ್ಲರ್‌ಗಳಿಂದ ಹಣಕಾಸಿನ ನೆರವು ದೊರೆಯುತ್ತಿತ್ತು ಎಂಬುದು ಬಹಿರಂಗವಾಗಿತ್ತು. ಅಲ್ಲದೆ, ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಂತೆ ಹ್ಯಾಂಡ್ಲರ್‌ಗಳು ಸೂಚನೆ ನೀಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಎಟಿಎಸ್ ಅಧಿಕಾರಿಗಳ ಪ್ರಕಾರ, ಬಂಧಿತರಲ್ಲಿ ಒಬ್ಬನಿಗೆ ಸ್ಫೋಟಕಗಳ ಕುರಿತು ಉತ್ತಮ ಜ್ಞಾನವಿದ್ದು, ಆತ ಕಾರ್ಯನಿರ್ವಹಿಸುವ ಟೈಮ್ ಬಾಂಬ್ ನಿರ್ಮಿಸುವ ಅಂತಿಮ ಹಂತದಲ್ಲಿದ್ದ. ನಿಖರವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಎಟಿಎಸ್ ತಂಡ, ಬಾಂಬ್ ನಿರ್ಮಾಣ ಪೂರ್ಣಗೊಳ್ಳುವ ಮುನ್ನವೇ ಆರೋಪಿಗಳನ್ನು ಬಂಧಿಸಿದೆ.
ಅಧಿಕೃತ ಮೂಲಗಳ ಪ್ರಕಾರ, ಬಂಧಿಸಲಾದ ಐವರು ಹಾಗೂ ಈ ಹಿಂದೆ ಬಂಧಿತರಾದ ಆರೋಪಿಗಳೊಂದಿಗೆ ಸುಧಾರಿತ ಸ್ಫೋಟಕ ಸಾಧನಗಳ ಪರೀಕ್ಷೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಸ್ಥಳೀಯ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮಾಹಿತಿ ನೀಡುವ ವೇಳೆ, ಈ ಗುಂಪು ಈ ಹಿಂದೆ ಕಚ್ಚಾ ಟೈಮ್ ಬಾಂಬ್ ಪರೀಕ್ಷಿಸಲು ಯತ್ನಿಸಿತ್ತು. ಆದರೆ ಆ ಪರೀಕ್ಷೆ ವಿಫಲವಾಗಿತ್ತು ಎಂದು ತಿಳಿಸಿದ್ದಾರೆ.
ಪ್ರಸ್ತುತ ಎಟಿಎಸ್ ಅಧಿಕಾರಿಗಳು, ಅಡಗಿಸಿಟ್ಟಿರುವ ಬಾಂಬ್ ತಯಾರಿಕೆ ಸಾಮಗ್ರಿಗಳು, ತಾಂತ್ರಿಕ ಕೈಪಿಡಿಗಳು ಹಾಗೂ ಉರ್ದು ಭಾಷೆಯಲ್ಲಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ತೀವ್ರಗಾಮಿ ಸಾಹಿತ್ಯವನ್ನು ಪತ್ತೆಹಚ್ಚಲು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.

