ದೆಹಲಿ : ಹರ್ಯಾಣದ ಜುಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಗೆಲುವು ಸಾಧಿಸಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಆಡಳಿತಾರೂಢ ಬಿಜೆಪಿ ಹರ್ಯಾಣ ವಿಧಾನಸಭೆಯಲ್ಲಿ ಬಹುಮತದ ಅಂಕವನ್ನು ದಾಟಿ 48 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 37 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಕ್ಟೋಬರ್ 5 ರಂದು ನಡೆದ ಹರ್ಯಾಣ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು.

ಕಳೆದ ವರ್ಷ ಫೋಗಟ್ ಅವರು ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸುದೀರ್ಘ ಪ್ರತಿಭಟನೆಯನ್ನು ನಡೆಸಿದರು. ರಾಜಕೀಯ ಪ್ರವೇಶದ ನಂತರ ಕಾಂಗ್ರೆಸ್‌ಗೆ ಧನ್ಯವಾದ ಅರ್ಪಿಸಿದ ಅವರು, ” ಕೆಟ್ಟ ಸಮಯದಲ್ಲಿ ಮಾತ್ರ ಅವರ ಜೊತೆ ಯಾರು ನಿಂತಿದ್ದಾರೆಂದು ಗೊತ್ತಾಗುತ್ತದೆ. ನಮ್ಮನ್ನು ರಸ್ತೆಯಲ್ಲಿ ಎಳೆದಾಡಿದಾಗ ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ನಮ್ಮೊಂದಿಗೆ ನಿಂತು ನಮ್ಮ ನೋವು, ಕಣ್ಣೀರನ್ನು ಅರ್ಥ ಮಾಡಿತ್ತು ಎಂದಿದ್ದರು.