ನವದೆಹಲಿ: ಹುಟ್ಟುತ್ತಲೇ ಬೆಳ್ಳಿ ಸ್ಪೂನ್‌ ಹಿಡಿದವರು, ಪಂಚತಾರಾ ಹೋಟೆಲ್‌ಗಳಲ್ಲೇ ಇರುವವರು ಜಾತಿ ಆಧಾರದಲ್ಲಿ ಬಡಜನರನ್ನು ಒಡೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಹುಲ್‌ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವದ ವೇಳೆ ಮಾತನಾಡಿದ ಮೋದಿ, ಚುನಾವಣೋತ್ತರ ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್‌ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, ಮತದಾರರು ಕಾಂಗ್ರೆಸ್‌ಗೆ ‘ನೋ ಎಂಟ್ರಿ’ ಬೋರ್ಡ್‌ ತೋರಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಅಪರೂಪ. 13 ವರ್ಷಗಳ ಹಿಂದೆ ಅಸ್ಸಾಂನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿತು. 60 ವರ್ಷಗಳಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರದ ಕೆಲವು ರಾಜ್ಯಗಳಿವೆ ಎಂದು ಮೋದಿ ಕುಟುಕಿದ್ದಾರೆ. ಹುಟ್ಟುತ್ತಲೇ ಬೆಳ್ಳಿ ಚಮಚ ಹಿಡಿದು, ಪಂಚತಾರಾ ಹೋಟೆಲ್‌ಗಳಲ್ಲಿ ಜೀವನ ನಡೆಸುತ್ತಿರುವವರು ಬಡವರು ಜಾತಿ ವಿಚಾರದಲ್ಲಿ ತಮ್ಮ ತಮ್ಮಲ್ಲೇ ಜಗಳ ಮಾಡಿಕೊಳ್ಳಬೇಕೆಂದು ಬಯಸುತ್ತಾರೆ. ನಮ್ಮ ದಲಿತ ಸಮುದಾಯ ಇದನ್ನು ಮರೆಯಬಾರದು ಎಂದು ಪ್ರಧಾನಿ ಎಚ್ಚರಿಸಿದ್ದಾರೆ.

ದೇಶವೇ ಮೊದಲ ಎನ್ನುವ ಸಂಕಲ್ಪ ಬಿಜೆಪಿ ಹೊಂದಿದೆ. ಬಿಜೆಪಿ ಬಡವರ ಸೇವೆಗೆ ಬದ್ಧವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಕಳೆದ ಹತ್ತು ವರ್ಷದಲ್ಲಿ ಭ್ರಷ್ಟಾಚಾರ ಒಂದೇ ಒಂದು ಕಳಂಕ ಇಲ್ಲ. ನಾವು ಸಮರ್ಪಣ ಭಾವದಿಂದ ಕೆಲಸ ಮಾಡಿದ್ದೇವೆ. ನಾನು ಸಿಎಂ ಮನೋಹರ ಲಾಲ್ ಕಟ್ಟರ್ ಮತ್ತು ಸೈನಿಗೆ ಶ್ಲಾಘಿಸುತ್ತೇನೆ.

ನಮ್ಮ ನೀತಿ ನಿಯತ್ತಿಗೆ ಬೆಂಬಲ ಸಿಕ್ಕಾಗ, ಕೆಲಸ ಮಾಡಲು ದ್ವಿಗುಣ ಶಕ್ತಿ ಬರುತ್ತದೆ. ಜಮ್ಮು ಕಾಶ್ಮೀರ ಅಭಿವೃದ್ಧಿಯಾಗುತ್ತದೆ, ಭಾರತ ಅಭಿವೃದ್ಧಿಯಾಗುತ್ತದೆ. ನಮ್ಮ ಎಲ್ಲ ಹೋರಾಟದ ಹಿಂದೆ ಕಾರ್ಯಕರ್ತರ ಶ್ರಮವಿದೆ. ಹೆಜ್ಜೆಗೆ ಹೆಜ್ಜೆ ಹಾಕಿ ಭುಜಕ್ಕೆ ಭುಜ ಕೊಟ್ಟು ನಡೆಯುವ ನಮ್ಮ ಕಾರ್ಯಕರ್ತರು ಯಾವುದಕ್ಕೂ ಬಗ್ಗುವುದಿಲ್ಲ ಎಂದು ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ್ದಾರೆ.