ನವದೆಹಲಿ: ನೀಟ್ ಯುಜಿ ಪರೀಕ್ಷೆಯ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ ಜುಲೈ 24ರಂದು ದೇಶವ್ಯಾಪಿ ಬೃಹತ್ ಪ್ರತಿಭಟನೆಗೆ ಇದೀಗ ಕರೆ ನೀಡಿದೆ.
ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಬರುವಂತೆ ಕೇಂದ್ರ ಸರ್ಕಾರವು ಪದೇ ಪದೇ ನೀಡಿದ ಆಹ್ವಾನ ಹಾಗೂ ನೀಡಿದ ಭರವಸೆಗಳ ನಡುವೆಯೂ ಈ ಹೋರಾಟಕ್ಕೆ ಕರೆಕೊಡಲಾಗಿದೆ.
ದೇಶಾದ್ಯಂತ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಈ ದೇಶವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಜೆಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವಿವಿಧ ವಿದ್ಯಾರ್ಥಿ ಸಂಘಟನೆಗಳು ಮತ್ತು ಒಕ್ಕೂಟಗಳು ಪ್ರತಿಭಟನೆಯ ಅನುಮತಿ ಹಾಗೂ ವ್ಯವಸ್ಥೆಗಾಗಿ ಪರಸ್ಪರ ಸಹಕರಿಸಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದೆ. “ಎಲ್ಲರ ಸಮ್ಮುಖದಲ್ಲಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಗಟ್ಟಿಯಾಗಿ ಓದಿ ಹೇಳಿ. ಪೋಲಿಸರ ದೌರ್ಜನ್ಯವನ್ನು ಎದುರಿಸಿದ ಹೋರಾಟಗಾರರ ಪರವಾಗಿ ಒಗ್ಗಟ್ಟು ಪ್ರದರ್ಶಿಸಿ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಹೋರಾಟಗಾರರು ಯಾವುದೇ ಕಾರಣಕ್ಕೂ ಹಿಂಸಾಚಾರಕ್ಕೆ ಇಳಿಯದೆ, ಪ್ರತಿಭಟನೆಯನ್ನು ಸಂಪೂರ್ಣವಾಗಿ ಶಾಂತಿಯುತ ಹಾಗೂ ಅಹಿಂಸಾತ್ಮಕ ರೀತಿಯಲ್ಲಿ ನಡೆಸಬೇಕು ಎಂದು ಸಂಸ್ಥೆ ಸಲಹೆ ನೀಡಿದೆ. ಅಲ್ಲದೆ, ಪ್ರತಿಭಟನೆಯ ಪ್ರತಿಯೊಂದು ಕ್ಷಣವನ್ನೂ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಅಕ್ರಮದ ವಿರುದ್ಧ ಸಿಜೆಪಿ ನಡೆಸುತ್ತಿರುವ ಪ್ರತಿಭಟನಾ ನಿರತರ ಮೇಲೆ ಪೊಲೀಸರು ಕೈಗೊಂಡ ಕ್ರಮವನ್ನು ಖಂಡಿಸಿ ಹಾಗೂ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲವನ್ನು ಸೂಚಿಸಲು ಸುಪ್ರೀಂ ಕೋರ್ಟ್‌ನ ವಕೀಲರು ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ವಿನೂತನವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಶಾಂತಿಯುತವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಜನರ ವಿರುದ್ಧ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿರುವುದಕ್ಕೆ ದೇಶದ ಕಾನೂನು ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಒಗ್ಗೂಡಿದ ಸುಪ್ರೀಂ ಕೋರ್ಟ್‌ನ ವಕೀಲರು, ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಹೋರಾಟದ ಹಕ್ಕನ್ನು ಸಮರ್ಥಿಸಿ ದೇಶದ ಸಂವಿಧಾನದ ಪ್ರಸ್ತಾವನೆಯನ್ನು ಬಹಿರಂಗವಾಗಿ ಪಠಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ಆದರೆ, ಪ್ರತಿಭಟನಾಕಾರರ ಧ್ವನಿಯನ್ನು ಅಡಗಿಸಲು ಪೊಲೀಸರು ಕೈಗೊಂಡಿರುವುದು ಸಾಂವಿಧಾನಿಕ ಮೌಲ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ವಕೀಲರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜೆಗಳಿಗೆ ಸಂವಿಧಾನ ನೀಡಿರುವ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ಮೂಲಭೂತ ತತ್ವಗಳನ್ನು ನೆನಪಿಸುವ ಉದ್ದೇಶದಿಂದ ಈ ಪಠಣ ಮಾಡಲಾಗಿದ್ದು, ಪೊಲೀಸರ ಅತಿಯಾದ ಬಲಪ್ರಯೋಗದ ವಿರುದ್ಧ ವಕೀಲರ ಸಮುದಾಯವು ಪ್ರತಿಭಟನಾಕಾರರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿದೆ.

