ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆನ್ನಲ್ಲೇ ಈಗ ಸಂಕುಚಿತ ನೈಸರ್ಗಿಕ ಅನಿಲ ದರವೂ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿದೆ.
ಬೆಲೆ ಏರಿಕೆಯ ನಂತರ ದೆಹಲಿಯಲ್ಲಿ ಸಿಎನ್‌ಜಿ ದರ ಪ್ರತಿ ಕೆಜಿಗೆ 77.09 ರೂಪಾಯಿಯಿಂದ 79.09 ರೂಪಾಯಿಗೆ ಏರಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಾರಿಗೆ ವೆಚ್ಚಗಳು ಹೆಚ್ಚುತ್ತಿರುವ ಬೆನ್ನಲ್ಲೇ ಈ ದರ ಏರಿಕೆಯು ಜನಸಾಮಾನ್ಯರಿಗೆ ಅದರಲ್ಲೂ ವಿಶೇಷವಾಗಿ ಆಟೋ, ಟ್ಯಾಕ್ಸಿ ಮತ್ತು ವಾಣಿಜ್ಯ ವಾಹನ ಸವಾರರಿಗೆ ಭಾರಿ ಹೊರೆಯಾಗಿ ಪರಿಣಮಿಸಿದೆ.
ಮಹಾನಗರ ಗ್ಯಾಸ್ ಲಿಮಿಟೆಡ್ (MGL) ಈಗಾಗಲೇ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ (MMR) ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿಯಷ್ಟು ಹೆಚ್ಚಿಸಿದೆ. ಮುಂಬೈನಲ್ಲಿ ಬೆಲೆ ಏರಿಕೆಯಾದ ಬೆನ್ನಲ್ಲೇ ಈಗ ದೆಹಲಿಯಲ್ಲೂ ದರ ಹೆಚ್ಚಳವಾಗಿರುವುದು ದೇಶದ ಇತರ ನಗರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಜಾಗತಿಕವಾಗಿ ಗ್ಯಾಸ್ ಮತ್ತು ತೈಲ ಬೆಲೆಗಳ ಮೇಲೆ ಒತ್ತಡ ಹೇರಿದೆ. ಇದರ ನೇರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇಂಧನ ಬೆಲೆಗಳು ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.

