ತಿರುವನಂತಪುರಂ: ಭಾರೀ ಮಳೆಯ ಹೊಡೆತಕ್ಕೆ ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ 84ಕ್ಕೆ ಏರಿಕೆಯಾಗಿದೆ. ಅಲ್ಲದೇ ನೂರಾರು ಮಂದಿ ಅವಶೇಷಗಳಡಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಗುಡ್ಡಗಾಡು ಪ್ರದೇಶವಾಗಿರುವ ಮೆಪ್ಪಾಡಿ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಭೀತಿ ಎದುರಾಗಿದೆ. ಈ ನಡುವೆ ಕೇರಳಕ್ಕೆ ಅಗತ್ಯ ನೆರವು ನೀಡುವುದಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಭರವಸೆ ನೀಡಿದ್ದಾರೆ.

ಈಗಾಗಲೇ ಸ್ಟಾಲಿನ್‌ ಸರ್ಕಾರದ ವತಿಯಿಂದ ರಕ್ಷಣಾ ಕಾರ್ಯಾಚರಣೆಗಾಗಿ 5 ಕೋಟಿ ರೂ. ತುರ್ತು ನೆರವು ಘೋಷಿಸಿದ್ದಾರೆ. ಅಲ್ಲದೇ ರಾಜ್ಯದಿಂದ ರಕ್ಷಣಾ ತಂಡಗಳನ್ನು ನಿಯೋಜಿಸುವಂತೆ ಹಿರಿಯ ಐಎಎಸ್ ಅಧಿಕಾರಿಗಳಾದ ಜಿ ಸಮೀರನ್ ಮತ್ತು ಜಾನಿ ಟಾಮ್ ವರ್ಗೀಸ್ ಅವರಿಗೆ ಜವಾಬ್ದಾರಿ ವಹಿಸಿದ್ದಾರೆ.

ಇನ್ನು ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಕರ್ನಾಟಕ ಸಿಎಂ ಸಿದ್ದರಾಮಯ್ಯ, ಕೇರಳದಲ್ಲಿ ಸಂಭವಿಸಿದ ಗುಡ್ಡ ಕುಸಿತ ಅವಘಡದಲ್ಲಿ 70ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಹಲವರು ಕಣ್ಮರೆಯಾಗಿರುವ ಸುದ್ದಿ ಕೇಳಿ ಎದೆ ನಲುಗಿತು. ಇಂತಹ ಸಂಕಷ್ಟದ ಸಮಯದಲ್ಲಿ ನೆರೆಯ ಕೇರಳ ಜನರ ಜೊತೆ ನಾವು ನಿಲ್ಲಲಿದ್ದೇವೆ. ಕೇರಳಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.