ಕೇರಳ: ಭೂಕುಸಿತದಿಂದ ವಯನಾಡಿನಲ್ಲಿ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಕ್ಷಣಾ ಪಡೆಗಳು ಹುಡುಕುವಾಗ ಕೆಸರಿನಲ್ಲಿ ಮನುಷ್ಯ ದೇಹದ ಭಾಗಗಳು ಸಿಗುತ್ತಿವೆ ಎಂದರೆ ದುರಂತವನ್ನ ಅರ್ಥೈಸುವುದುಬೇಕಿಲ್ಲ. ವಯನಾಡಿಗೆ ಸೇರಿದ ಮೂರು ಗ್ರಾಮಗಳಲ್ಲಿ ಮರಣ ಮೃದಂಗ ಬಾರಿಸಿದೆ.
ಇದರ ಬೆನ್ನಲ್ಲೇ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ನಿಮಗೆ ಸಂಬಂಧ ಪಟ್ಟವರ ಕುರಿತು ಎಲ್ಲ ಆಸೆ ಬಿಟ್ಟು ಬಿಡಿ ಎಂದು ಸಂತ್ರಸ್ಥರಿಗೆ ಹೇಳಿದ್ದಾರೆ.
ವಯನಾಡಿನ ಭೂಕುಸಿತಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್ ಅವರು, ಭೂಮಿ ಕುಸಿದು ಮೂರು ದಿನಗಳು ಕಳೆಯುತ್ತಿದ್ದು ಈಗಾಗಲೇ ಸಾವಿನಸಂಖ್ಯೆ 300 ಗಡಿ ದಾಟಿದೆ. ಹೀಗಾಗಿ ಆ ಪ್ರದೇಶಗಳಲ್ಲಿ ಜೀವಂತವಾಗಿರುವವರು ಯಾರು ಸಿಗಲ್ಲ. ಮುಂಡಕ್ಕೈ, ಚೂರಲ್ ಮಾಲಾ ಮತ್ತು ಅಟ್ಟಮಾಲ ಪ್ರದೇಶಗಳಲ್ಲಿ ಕಾಪಾಡಬೇಕು ಎಂದರೆ ಬದುಕಿದವರು ಯಾರು ಇಲ್ಲ. ಮುಂಡಕ್ಕೈನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಚೂರಲ್ ಮಾಲಾದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 29 ವಿದ್ಯಾರ್ಥಿಗಳು ಕಾಣೆಯಾಗಿದ್ದಾರೆ. ನಿಮ್ಮವರು ಬದುಕಿದ್ದಾರೆ ಎನ್ನುವ ಆಸೆ ಬಿಟ್ಟು ಬಿಡಿ ಎಂದು ಸಿಎಂ ಹೇಳಿದ್ದಾರೆ.
ದುರಂತದಲ್ಲಿ ಯಾರಾದರೂ ಪ್ರತ್ಯೇಕವಾಗಿ ಸಿಲುಕಿಕೊಂಡಿದ್ದಾರೆಯೇ ಎಂದು ರಕ್ಷಣಾ ಕಾರ್ಯಕರ್ತರು ಪರಿಶೀಲನೆ ಮಾಡುತ್ತಿದ್ದಾರೆ.

