ವಯನಾಡ್: ಎಡೆಬಿಡದ ಭಾರೀ ಮಳೆಗೆ ಮಂಗಳವಾರ ಭೀಕರ ಭೂಕುಸಿತ ಸಂಭವಿಸಿದ ಘಟನೆ ಕೇರಳದ ವಯನಾಡ್ ಜಿಲ್ಲೆಯಲ್ಲಿ ನಡೆದಿದೆ.
ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯ ಕಲ್ಲಾಡಿ ಬಳಿಯ ಮೀನಾಕ್ಷಿ ಸೇತುವೆ ಹತ್ತಿರ ಈ ಘಟನೆ ನಡೆದಿದ್ದು, ಪ್ರವಾಸಿ ಹೋಂಸ್ಟೇಗಳು ಹಾಗೂ ಆನಕ್ಕಂಪೋಯಿಲ್-ಮೇಪ್ಪಾಡಿ ಸುರಂಗ ಮಾರ್ಗ ನಿರ್ಮಾಣದ ಕಾರ್ಮಿಕರು ತಂಗಿದ್ದ ಜಾಗದ ಮೇಲೆ ಮಣ್ಣು ಕುಸಿದು ಬಿದ್ದಿದೆ.
ಘಟನಾ ಸ್ಥಳದಲ್ಲಿ ಸುರಂಗ ರಸ್ತೆ ಕಾಮಗಾರಿ ನಡೆಯುತ್ತಿದ್ದುದರಿಂದ ಹಲವಾರು ಕಾರ್ಮಿಕರು ಸ್ಥಳದಲ್ಲಿದ್ದರು ಎನ್ನಲಾಗಿದ್ದು, ಮಣ್ಣಿನ ಅಡಿಯಲ್ಲಿ ಹಲವರು ಸಿಲುಕಿರುವ ಭೀತಿ ಎದುರಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳೇ ತಕ್ಷಣವೇ ಕಾರ್ಯಪ್ರವೃತ್ತರಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಇಬ್ಬರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಗಾಯಗೊಂಡಿರುವ ಐವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇದುವರೆಗೆ ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ. ಆದರೆ ಕಾರ್ಮಿಕರನ್ನು ಕರೆದೊಯ್ಯಲು ನಿಲ್ಲಿಸಿದ್ದ ಹಲವು ವಾಹನಗಳು ಸಂಪೂರ್ಣ ಜಖಂಗೊಂಡಿವೆ.

