ಹೈದರಾಬಾದ್: ಇಬ್ಬರು ಹತ್ತನೇ ತರಗತಿ ವಿದ್ಯಾರ್ಥಿಗಳು ತಮ್ಮ ಶಾಲೆಯ ಪ್ರಾಂಶುಪಾಲೆಯನ್ನೇ ಚಾಕುವಿನಿಂದ 27 ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
ಆಗಸ್ಟ್ 11ರಂದು ಪ್ರಾಂಶುಪಾಲೆ ರೂಪಾ ರೆಡ್ಡಿ ಅವರು ತಮ್ಮ ಮನೆಯಲ್ಲಿದ್ದಾಗ ಈ ಘೋರ ಘಟನೆ ನಡೆದಿದ್ದು, ಕೊಲೆಯ ನಂತರ ಆರೋಪಿಗಳು ಮನೆಯಲ್ಲಿದ್ದ ನಗದು ಹಾಗೂ ಮೊಬೈಲ್ ಫೋನ್‌ನೊಂದಿಗೆ ಪರಾರಿಯಾಗಿದ್ದರು. ಪ್ರಕರಣದ ತನಿಖೆಗೆ ನಲ್ಗೊಂಡ ಎಸ್‌ಪಿ ಶರತ್ ಚಂದ್ರ ಪವಾರ್ ಅವರ ನೇತೃತ್ವದಲ್ಲಿ 5 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಸುಮಾರು 70ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಆರಂಭದಲ್ಲಿ ಕೊಲೆಗಾರರ ಸುಳಿವು ಸಿಕ್ಕಿರಲಿಲ್ಲ.
ಆದರೆ ರೂಪಾ ರೆಡ್ಡಿ ಅವರು ಸಾವಿಗೂ ಮುನ್ನ ತಮ್ಮ ಅತ್ತೆಯೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ ಯಾರನ್ನೋ “ಬಾಬು” ಎಂದು ಕರೆದಿದ್ದರು. ಶಾಲೆಯಲ್ಲೂ ವಿದ್ಯಾರ್ಥಿಗಳನ್ನು ಕರೆಯಲು ಅವರು ಇದೇ ಪದ ಬಳಸುತ್ತಿದ್ದರು ಎಂಬುದನ್ನು ಗಮನಿಸಿದ ಪೊಲೀಸರು, ಹತ್ಯೆಯ ದಿನ ಹಾಗೂ ತದನಂತರ ಶಾಲೆಗೆ ಗೈರಾಗಿದ್ದ ವಿದ್ಯಾರ್ಥಿಗಳ ಮೇಲೆ ಕಣ್ಣಿಟ್ಟರು. ಘಟನೆಯ ನಂತರ ನಾಲ್ಕು ದಿನಗಳ ಕಾಲ ಶಾಲೆ ಬಂದ್ ಆಗಿದ್ದು, ಪುನಃ ಆರಂಭವಾದಾಗ ಗೈರಾಗಿದ್ದ 13 ವಿದ್ಯಾರ್ಥಿಗಳಲ್ಲಿ ಐವರು 10ನೇ ತರಗತಿಯವರಾಗಿದ್ದರು.
ಅವರಲ್ಲಿ ಇಬ್ಬರು ವಿದ್ಯಾರ್ಥಿಗಳು ದಿಢೀರನೆ ಕೈತುಂಬ ಹಣ ಹಿಡಿದು ದುಬಾರಿ ವಸ್ತುಗಳನ್ನು ಖರೀದಿಸುತ್ತಿರುವುದು ಪೊಲೀಸರ ಅನುಮಾನ ಹೆಚ್ಚಿಸಿತು. ವಿಚಾರಣೆ ನಡೆಸಿದಾಗ ಒಬ್ಬ ಅಪ್ರಾಪ್ತ ವಿದ್ಯಾರ್ಥಿಯ ಬಳಿ 1.54 ಲಕ್ಷ ರೂಪಾಯಿ ನಗದು ಪತ್ತೆಯಾಯಿತು. ಈ ಹಣಕ್ಕೆ ಆತ ನೀಡಿದ ಸ್ಪಷ್ಟನೆ ಅನುಮಾನಾಸ್ಪದವಾಗಿದ್ದರಿಂದ, ನೋಟುಗಳ ಮೇಲಿದ್ದ ರಕ್ತದ ಕಲೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ (FSL) ಕಳುಹಿಸಲಾಯಿತು. ಪರೀಕ್ಷೆಯಲ್ಲಿ ಆ ರಕ್ತ ರೂಪಾ ರೆಡ್ಡಿ ಅವರದ್ದೇ ಎಂದು ದೃಢಪಟ್ಟಿದ್ದರಿಂದ ಪೊಲೀಸರು ಇಬ್ಬರೂ ವಿದ್ಯಾರ್ಥಿಗಳನ್ನು ಬಂಧಿಸಿದರು.
ಆರೋಪಿಗಳಲ್ಲಿ ಒಬ್ಬ ವಿದ್ಯಾರ್ಥಿ ಹಿಂದೆ ಶಾಲೆಯ ಹಾಸ್ಟೆಲ್‌ನಲ್ಲಿದ್ದಾಗ ಮದ್ಯಪಾನ ಮತ್ತು ಬೈಕ್ ಶೋಕಿ ತಳೆದಿದ್ದ. ಈ ವಿಷಯ ತಿಳಿದು ರೂಪಾ ರೆಡ್ಡಿ ಆತನನ್ನು ತರಾಟೆಗೆ ತೆಗೆದುಕೊಂಡು ಹಾಸ್ಟೆಲ್‌ನಿಂದ ಹೊರಹಾಕಿ ಡೇ ಸ್ಕಾಲರ್ ಆಗಿ ಬದಲಾಯಿಸಿದ್ದರು. ಇದರಿಂದ ಪ್ರಾಂಶುಪಾಲೆಯ ಮೇಲೆ ಆತನಿಗೆ ದ್ವೇಷವಿತ್ತು. ಅಲ್ಲದೆ ಶಾಲೆಯ ಶುಲ್ಕದ ಹಣವನ್ನು ಪ್ರಾಂಶುಪಾಲೆ ಮನೆಗೇ ಒಯ್ಯುತ್ತಾರೆ ಎಂಬ ಮಾಹಿತಿ ತಿಳಿದು, ಹಣ ದರೋಡೆ ಮಾಡಲು ಹತ್ಯೆಗೆ ಐದು ದಿನ ಮುಂಚೆಯೇ ಅವರ ಮನೆಯ ಜಾಗ ಪರಿಶೀಲನೆ (ರೆಕ್ಕಿ) ನಡೆಸಿದ್ದ.
ಘಟನೆಯ ದಿನ ಮುಖಕ್ಕೆ ಮಾಸ್ಕ್ ಧರಿಸಿ ಮನೆ ಪ್ರವೇಶಿಸಿದ್ದ ವಿದ್ಯಾರ್ಥಿಗಳ ಮೇಲೆ ರೂಪಾ ರೆಡ್ಡಿ ದರೋಡೆಗೆ ಬಂದಾಗ ಪ್ರತಿರೋಧ ಒಡ್ಡಿದ್ದಾರೆ. ಈ ವೇಳೆ ಒಬ್ಬ ವಿದ್ಯಾರ್ಥಿಯ ಮಾಸ್ಕ್ ಕಳಚಿದ್ದರಿಂದ ಆತನನ್ನು ಪ್ರಾಂಶುಪಾಲೆ ಗುರುತಿಸಿದ್ದಾರೆ. ತಕ್ಷಣವೇ ಹೆದರಿದ ವಿದ್ಯಾರ್ಥಿಗಳು ಸಿಕ್ಕಿಬೀಳುವ ಭಯದಿಂದ ಅವರ ಮೇಲೆ ಚಾಕುವಿನಿಂದ 27 ಬಾರಿ ಇರಿದು ಹತ್ಯೆ ಮಾಡಿದ್ದಾರೆ.
ತಮ್ಮದೇ ಶಾಲೆಯ ಪ್ರಾಂಶುಪಾಲೆಯನ್ನು ಕೊಲೆ ಮಾಡಿದ ಈ ಇಬ್ಬರೂ ವಿದ್ಯಾರ್ಥಿಗಳು ಅಪ್ರಾಪ್ತರಾಗಿರುವುದರಿಂದ, ಅವರನ್ನು ಜುವೆನೈಲ್ ಜಸ್ಟಿಸ್ ಬೋರ್ಡ್ (ಬಾಲ ನ್ಯಾಯ ಮಂಡಳಿ) ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

