ನವದೆಹಲಿ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ , ಬಿಜೆಪಿ ಸಂಸದೆ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಕುಲ್ವಿಂದರ್​ ಕೌರ್​ರನ್ನ ಅಮಾನತು ಮಾಡಲಾಗಿದೆ. ಜೊತೆಗೆ ಆರೋಪಿ ವಿರುದ್ಧ ಸಿಐಎಸ್‌ಎಫ್ ತನಿಖೆ ಆರಂಭಿಸಿದೆ. ಮಾಹಿತಿ ಪ್ರಕಾರ ತಕ್ಷಣಕ್ಕೆ ಜಾರಿ ಬರುವಂತೆ ಮಹಿಳಾ ಪೇದೆಯನ್ನು ಅಮಾನತು ಮಾಡಲಾಗಿದೆ.

ಸಿಐಎಸ್‌ಎಫ್ ಅಧಿಕಾರಿಗಳ ನೀಡಿರುವ ಲಿಖಿತ ದೂರಿನ ಆಧಾರದ ಮೇಲೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಸಿಐಎಸ್‌ಎಫ್‌ನಿಂದ ಸ್ಥಳೀಯ ಪೊಲೀಸರಿಗೂ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ,
ಗುರುವಾರ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕಾನ್ಸ್‌ಟೇಬಲ್‌ ನಟಿ ಕಂಗನಾ ರನೌತ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಚೆಕಿಂಗ್ ವೇಳೆ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರನೌತ್ ಆರೋಪಿಸಿದ್ದರು. ರೈತರ ಆಂದೋಲನದ ವೇಳೆ ಕಂಗನಾ ಹೇಳಿಕೆಯಿಂದ ಕೋಪಗೊಂಡ ಕಾನ್‌ಸ್ಟೆಬಲ್ ಬಿಜೆಪಿ ಸಂಸದೆಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗುತ್ತಿದೆ.