ಬಿಹಾರ: ಲೋಕಸಭಾ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ಯಿಂದ ಸ್ಪರ್ಧಿಸಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸಿದೆ. ಇದರಿಂದಾಗಿ ಚಿರಾಗ್ ಪಾಸ್ವಾನ್ ಅವರು 5 ಸ್ಥಾನಗಳಲ್ಲಿ ಸ್ಪರ್ಧಿಸಿ ಎಲ್ಲವನ್ನೂ ಗೆದ್ದುಕೊಂಡಿದ್ದಾರೆ. ಇದರಿಂದ ರಾಮ್ ವಿಲಾಸ್ ಪಾಸ್ವಾನ್ ಅವರ ನೈಜ ಉತ್ತರಾಧಿಕಾರಿ ಎಂಬುದು ಸಾಬೀತಾದಂತಾಗಿದೆ.
ಪ್ರತಿಪಕ್ಷಗಳ ಮೈತ್ರಿ ಕೂಟ ಇಂಡಿ ಬಲವನ್ನು ಪಡೆದುಕೊಂಡಿದೆ. ಬಿಹಾರದಲ್ಲಿ ಎನ್ಡಿಎ 40ರಲ್ಲಿ 30 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ 12 ಸ್ಥಾನಗಳು, ಜನತಾದಳ ಯುನೈಟೆಡ್ 12 ಸ್ಥಾನಗಳು, ಲೋಕ ಜನಶಕ್ತಿ ಪಕ್ಷ(ರಾಮ್ವಿಲಾಸ್ ಪಾಸ್ವಾನ್) 5 ಸ್ಥಾನಗಳನ್ನು ಪಡೆದಿದೆ ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ 1 ಸ್ಥಾನವನ್ನು ಪಡೆದುಕೊಂಡಿದೆ.
ಮೈತ್ರಿಕೂಟದಲ್ಲಿ ಸ್ಪರ್ಧಿಸಿದ್ದ ಬಿಜೆಪಿ 17 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆದ್ದಿದೆ. ಮತ್ತೊಂದೆಡೆ ನಿತೀಶ್ ಕುಮಾರ್ ಅವರ ಜನತಾದಳ ಯುನೈಟೆಡ್ 16 ಸ್ಥಾನಗಳಲ್ಲಿ ಸ್ಪರ್ಧಿಸಿ 12ರಲ್ಲಿ ಗೆದ್ದಿದೆ.
2019ರ ಚುನಾವಣೆಯಲ್ಲಿ ಕೂಡಾ ರಾಮ್ವಿಲಾಸ್ ಪಾಸ್ವಾನ್ ನೇತೃತ್ವದಲ್ಲಿ ಎಲ್ಜೆಪಿ, ಎನ್ಡಿಎ ಸೀಟು ಹೊಂದಾಣಿಕೆಯಡಿ ಹಂಚಿಕೆಯಾಗಿದ್ದ ಎಲ್ಲಾ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಎಲ್ಜೆಪಿ ಹಾಜಿಪುರ, ವೈಶಾಲಿ, ಸಮಷ್ಟಿಪುರ, ಖಗಾರಿಯಾ ಹಾಗೂ ಜಮುಯಿ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

