ನವದೆಹಲಿ: ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನೊಬ್ಬನನ್ನು ನೌಕಾಪಡೆಯ ಸೀ ಕಿಂಗ್ ಚಾಪರ್ ಬಳಸಿ ರಕ್ಷಿಸಲಾಗಿದೆ.
ಮುಂಬೈನಿಂದ ಸುಮಾರು 370 ಕಿಲೋಮೀಟರ್ ದೂರದ ಸಾಗರ ಪ್ರದೇಶದಲ್ಲಿ ಚೀನಾದ ಝೋಂಗ್ ಶಾನ್ ಮೆನ್ ಎಂಬ ನೌಕೆಯು ಹವಾಮಾನ ವೈಪರೀತ್ಯದಿಂದ ಚಲಿಸಲು ಆಗಿಲ್ಲ. ಹಡಗಿನ ನಾವಿಕನಿಗೆ ಗಂಭೀರವಾಗಿ ಗಾಯವಾಗಿದ್ದು, ರಕ್ತಸ್ರಾವದಿಂದ ತೀವ್ರ ತೊಂದರೆಗೆ ಸಿಲುಕಿದ್ದನು.
ಈ ಕುರಿತು ಮುಂಬೈನಲ್ಲಿರುವ ಮರಿಟೈಮ್ ರೆಸ್ಕ್ಯೂ ಕೋ-ಆಪರೇಷನ್ ಸೆಂಟರ್‌ಗೆ ಮಂಗಳವಾರ ರಾತ್ರಿ ಕರೆ ಬಂದಿದೆ. ಕೂಡಲೇ 51 ವರ್ಷದ ನಾವಿಕನ ರಕ್ಷಣೆ ಮಾಡಬೇಕು ಎಂದು ಕರೆ ಮಾಡಲಾಗಿತ್ತು.
ಭಾರತೀಯ ನೌಕಾಪಡೆಯ ಸೀ ಕಿಂಗ್ ಹೆಲಿಕಾಪ್ಟರ್‌ಅನ್ನು ಶಿಖ್ರಾದಲ್ಲಿರುವ ಭಾರತದ ನೌಕಾಪಡೆಯ ಏರ್ ಸ್ಟೇಷನ್‌ನಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಹವಾಮಾನ ವೈಪರೀತ್ಯದ ಕುರಿತು ಮಾಹಿತಿ ಇದ್ದರೂ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆಯು ಚೀನಾದ ನಾವಿಕನನ್ನು ರಕ್ಷಿಸಿ, ಆತನಿಗೆ ವೈದ್ಯಕೀಯ ನೆರವು ನೀಡಿದೆ.
ಈ ರೋಚಕ ವಿಡಿಯೊವನ್ನು ನೌಕಾಪಡೆಯು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನೌಕಾಪಡೆಯ ಮಾನವೀಯತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

