ನವದೆಹಲಿ: ಲೋಕಸಭೆ ಸಾರ್ವತ್ರಿಕ ಚುನಾವಣೆಯ ವೇಳೆ ಉತ್ತರ ಭಾರತದ ರಾಜ್ಯಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ಅಗ್ನಿಪಥ್ ಯೋಜನೆಯಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಅಗ್ನಿವೀರರ ಸಂಖ್ಯೆ, ಸಂಬಳ ಸೇರಿ ಮತ್ತಿತರ ನಿಯಮಗಳನ್ನು ಪರಿಷ್ಕರಿಸಲಿದೆ ಎಂದು ಹೇಳಲಾಗಿದೆ. ಅಗ್ನಿಪಥ್‌ ಯೋಜನೆಯ ಪ್ರಸ್ತುತ ನಿಯಮಗಳ ಪ್ರಕಾರ, 4 ವರ್ಷಗಳ ತರಬೇತಿಯ ಬಳಿಕ ಶೇಕಡಾ 75 ಅಗ್ನಿವೀರರು ನಿವೃತ್ತಿ ಹೊಂದಬೇಕು. 25 ಪ್ರತಿಶತದಷ್ಟು ಯುವಕರನ್ನು ಸೇನೆಗೆ ಆಯ್ಕೆಯಾಗುತ್ತಾರೆ.

ಈ ನಿಯಮಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಜೊತೆಗೆ ಎನ್​ಡಿಎ ಮಿತ್ರಪಕ್ಷಗಳು ಸಹ ಅಗ್ನಿಪಥ್ ನಿಯಮಗಳನ್ನು ಮರುಪರಿಶೀಲಿಸಲು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಡುವ ಸಾಧ್ಯತೆ ಇದೆ.

4 ವರ್ಷಗಳ ಅವಧಿಯ ಬಳಿಕ ಅಗ್ನಿವೀರರು ನಿವೃತ್ತಿ ಮತ್ತು ಸೇನೆಗೆ ಸೇರುವವರ ಸಂಖ್ಯೆಯನ್ನು ಶೇಕಡಾ 50: 50 ರಷ್ಟು ಆಗಲಿದೆ. ಈಗಿರುವ 21 ವರ್ಷ ವಯೋಮಿತಿ ಬದಲಿಗೆ 23 ವರ್ಷಕ್ಕೆ ಅರ್ಹತೆ ಹೆಚ್ಚಳವಾಗಲಿದೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವೇತನದಲ್ಲೂ ಬದಲಾವಣೆ ತರುವ ಯೋಜನೆ ಇದೆ ಎಂದರು.