ಗಾಂಧಿನಗರ: ರಾಜ್ಯದಲ್ಲಿ ಡೆಂಗ್ಯೂ ಕಾಯಿಲೆ ಜನರನ್ನು ಆತಂಕದಲ್ಲಿಟ್ಟಿದೆ. ಇತ್ತ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ಹಾವಳಿ ಕಂಡು ಬಂದಿದೆ. ಈ ಮಧ್ಯೆ ಗುಜರಾತ್‌ನಲ್ಲಿ ಚಾಂದಿಪುರ ವೈರಸ್ ಪತ್ತೆಯಾಗಿದೆ. ಈಗಾಗಲೇ ವೈರಸ್‌ಗೆ 6 ಮಕ್ಕಳು ಬಲಿಯಾಗಿದ್ದು, ಆತಂಕ ಮೂಡಿಸಿದೆ.
ಜುಲೈ 10ರಿಂದ ಗುಜರಾತ್‌ನಲ್ಲಿ ಶಂಕಿತ ಚಂಡಿಪುರ ವೈರಲ್ ಸೋಂಕಿನಿಂದ ಆರು ಮಕ್ಕಳು ಮೃತಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ಮಾಹಿತಿ ನೀಡಿದ್ದಾರೆ. ಎಲ್ಲ ಸೋಂಕಿತರ ರಕ್ತದ ಮಾದರಿಗಳನ್ನು ದೃಢೀಕರಣಕ್ಕಾಗಿ ಪುಣೆಯ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ.
ರೋಗ ಲಕ್ಷಣ
ಚಾಂದಿಪುರ ವೈರಸ್ ಸೋಂಕು ಬಾಧಿತರಲ್ಲಿ ಸಾಮಾನ್ಯ ಜ್ವರದ ಲಕ್ಷಣವೇ ಕಂಡು ಬರುತ್ತದೆ. ಬಾಧಿತರಲ್ಲಿ ದಿಢೀರ್ ಜ್ವರ, ತೀವ್ರ ತಲೆನೋವು, ವಾಂತಿ, ಸ್ನಾಯು ಸೆಳೆತ, ಪ್ರಜ್ಞಾಹೀನತೆ, ಅರೆನಿದ್ರಾವಸ್ಥೆ ಕಂಡು ಬರುತ್ತದೆ. ತಕ್ಷಣ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ರಾಬ್ಡೋವೆರಿಡೆ ವರ್ಗಕ್ಕೆ ಸೇರಿದ ವೈರಸ್ ಈ ರೋಗಕ್ಕೆ ಕಾರಣ.

