ನವದೆಹಲಿ: ಡೀಸೆಲ್‌ ಮಾರಾಟಕ್ಕೆ ಕೇಂದ್ರ ಸರ್ಕಾರ ಮಿತಿ ಹೇರಿದೆ. ಪೆಟ್ರೋಲ್‌ ಬಂಕ್‌ಗಳಲ್ಲಿ ಒಂದು ವಾಹನಕ್ಕೆ ದಿನಕ್ಕೆ 200 ಲೀಟರ್‌ ಡೀಸೆಲ್‌ ಖರೀದಿಗೆ ಮಿತಿ ನಿಗದಿಪಡಿಸಲಾಗಿದೆ.

ಇಂಧನ ಅಕ್ರಮ ದಾಸ್ತಾನು ಮತ್ತು ಕಾಳಸಂತೆಯಲ್ಲಿ ಮಾರಾಟವನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ತಿಳಿಸಿದೆ. ವಾಣಿಜ್ಯ, ಕೈಗಾರಿಕಾ ಮತ್ತು ಸಾಂಸ್ಥಿಕ ಗ್ರಾಹಕರು ಇನ್ಮುಂದೆ ರಿಟೇಲ್‌ ಬಂಕ್‌ಗಳಲ್ಲಿ ಡೀಸೆಲ್‌ ಖರೀದಿಸುವಂತಿಲ್ಲ. ವಾಣಿಜ್ಯ ಉದ್ದೇಶಕ್ಕೆ ನಿಗದಿಪಡಿಸಿದ ಮಾರಾಟ ಕೇಂದ್ರಗಳಿಂದಲೇ ಇಂಧನ ಖರೀದಿಸಬೇಕು ಎಂದು ಸೂಚಿಸಿದೆ.

ಪೆಟ್ರೋಲ್ ಪಂಪ್‌ಗಳಲ್ಲಿ ಡೀಸೆಲ್ ಲೀಟರ್‌ಗೆ 95.20 ರೂ.ಗಳಾಗಿದ್ದರೆ, ಬೃಹತ್ ಮಾರಾಟ ಕೇಂದ್ರಗಳಲ್ಲಿ ಈ ಬೆಲೆ 134.50 ರೂ. ಇದೆ. ದರ ಕಡಿಮೆ ಇರುವುದರಿಂದ ಬೃಹತ್‌ ವಾಹನಗಳ ಗ್ರಾಹಕರು ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ಖರೀದಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಹೊಸ ನಿಯಮ ಜಾರಿಗೊಳಿಸಲಾಗಿದೆ.

ರಿಟೇಲ್‌ ಬಂಕ್‌ಗಳಲ್ಲಿ ಡೀಸೆಲ್‌ ಅನ್ನು ವಾಹನದ ಇಂಧನ ಟ್ಯಾಂಕ್‌ಗೇ ತುಂಬಿಸಿ ಮಾರಬೇಕು. ಕ್ಯಾನ್‌, ಬ್ಯಾರೆಲ್‌ಗಳಲ್ಲಿ ತುಂಬಿಸಿ ಮಾರುವಂತಿಲ್ಲ. ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಿತಾ ಸಂಸ್ಥೆ ಅನುಮತಿಸಿದ ಕ್ಯಾನ್‌ನಲ್ಲಿ ಡೀಸೆಲ್‌ ಖರೀದಿಸಬಹುದು ಎಂದು ಸೂಚನೆ ನೀಡಿದೆ.